ಬೆಂಗಳೂರು: ವೀರಶೈವ- ಲಿಂಗಾಯಿತರಲ್ಲೇ ಅತ್ಯಂತ ಪ್ರಭಾವಿಗಳಾದ ಪಂಚಮಸಾಲಿ ಸಮುದಾಯದ ರಾಜಕೀಯ ಒಗ್ಗಟ್ಟು ಈಗ ಬಿಜೆಪಿಗೆ ಭಾರಿ ತಲೆನೋವು ಸೃಷ್ಟಿಸಿದೆ.
ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯದ ಒಗ್ಗಟ್ಟಿನ ಪ್ರಭಾವದ ಬಿಸಿ ಬಿಜೆಪಿಗೆ ತಟ್ಟಿದೆ. ಪಕ್ಷವನ್ನು ಮೀರಿದ ಈ ಸಮುದಾಯದ ಮತ ಕೇಂದ್ರೀಕರಣದಿಂದಾಗಿಯೇ ಅರುಣ್ ಶಹಾಪುರ ಸೋಲು ಅನುಭವಿಸಿದ್ದು, ಭವಿಷ್ಯದಲ್ಲಿ ಎಲ್ಲ ಪಕ್ಷಗಳಿಗೂ ಇದು ಎಚ್ಚರಿಕೆಯ ಕರೆಗಂಟೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಪಕ್ಷ ಯಾವುದೇ ಇರಲಿ ಪಂಚಮಸಾಲಿ ಅಭ್ಯರ್ಥಿ ಗೆಲ್ಲಬೇಕು ಎಂಬ ಅಲಿಖಿತ ಸಂದೇಶ ಪ್ರಕಾಶ್ ಹುಕ್ಕೇರಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ.
ಇದನ್ನೂ ಓದಿ:ಮೋದಿ ತಾಯಿಗೆ ನೂರು ವರ್ಷದ ಸಂಭ್ರಮ: ತಾಯಿಯ ಆಶೀರ್ವಾದ ಪಡೆದ ಪ್ರಧಾನಿ ಮೋದಿ
ರಾಜ್ಯದ ನಲವತ್ತು ಕ್ಷೇತ್ರಗಳಲ್ಲಿ ಪಂಚಮಸಾಲಿ ಸಮುದಾಯ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಭಾವ ಹೊಂದಿದೆ. ಕಾಂಗ್ರೆಸ್ ಆಗಲಿ ಬಿಜೆಪಿಯಾಗಲಿ, ನಮ್ಮ ಸಮುದಾಯದ ಅಭ್ಯರ್ಥಿಗೆ ಮತ ಎಂಬ ಧೋರಣೆಗೆ ಬರಲಾಗಿದೆ. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂಬ ಹೋರಾಟವೂ ಈ ಒಗ್ಗಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದೆ.
ಯತ್ನಾಳ್ ನಿರ್ಣಾಯಕ: ಇದೆಲ್ಲದರ ಜತೆಗೆ ಶಾಸಕ ಬಸನಗೌಡ ಯತ್ನಾಳ್ ಸಮುದಾಯದ ಒಗ್ಗಟ್ಡಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪಕ್ಷಾತೀತವಾಗಿ ಅವರ ವರ್ಚಸ್ಸು ಹೆಚ್ಚಿದೆ. ಯತ್ನಾಳ್ ಹೇಳಿಕೆ ಜೋಕರ್ ರೀತಿ ಇದೆ ಎಂದು ನಿರಾಕರಿಸುವ ಸ್ಥಿತಿಯಲ್ಲಿ ಈಗ ಬಿಜೆಪಿ ಇಲ್ಲವಾಗಿದ್ದು, ಲಿಂಗಾಯಿತರಲ್ಲೇ ಒಳಪಂಗಡಗಳ ಅಸ್ಮಿತೆಯ ಬಿಸಿಯನ್ನು ಬಿಜೆಪಿ ಈಗ ಹೇಗೆ ನಿಭಾಯಿಸುತ್ತದೆ ಎಂಬುದು ಪ್ರಶ್ನೆಯಾಗಿ ಉಳಿದಿದೆ.