Advertisement

ರಾಜ್ಯೋತ್ಸವಕ್ಕೆ ಪಂಚ ಯೋಜನೆ

12:16 PM Nov 01, 2017 | Team Udayavani |

ಬೆಂಗಳೂರು: ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ವಿಭಿನ್ನವಾಗಿ, ವೈವಿಧ್ಯಮಯವಾಗಿ ಆಚರಿಸಲು ತೀರ್ಮಾನಿಸಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ, “ಐದು’ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಬಂಗಾರದ ಎಲೆಗಳು, ವಜ್ರದ ಬೇರುಗಳು, ಯುವಕಾವ್ಯ ಅಭಿಯಾನ, ಚಕೋರ ಕವಿ ಕಾವ್ಯ ಸಂವಾದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕನ್ನಡ ಸಾಹಿತ್ಯ ಚಟುವಟಿಕೆಗೆ ಮತ್ತಷ್ಟು ಮೆರುಗು ನೀಡುವತ್ತ ಕ್ರಿಯಾಶೀಲ ಹೆಜ್ಜೆಯನ್ನು ಇಟ್ಟಿದೆ.

Advertisement

ಸಾಹಿತ್ಯ ಕ್ಷೇತ್ರವನ್ನು ವೃಕ್ಷದ ಪರಿಕಲ್ಪನೆಯಲ್ಲಿ “ಬಂಗಾರದ ಎಲೆಗಳು’ ಎಂಬ ಸಾಹಿತಿಗಳ ಕೋಶ ಮತ್ತು “ವಜ್ರದ ಬೇರುಗಳು’ ಎಂಬ ಪ್ರಾಚೀನ ಮತ್ತು ಆಧುನಿಕ ಸಾಹಿತ್ಯದ ವಿವಿಧ ಪ್ರಕಾರಗಳ ಪ್ರಕಟಣೆಗಳನ್ನು ಹೊರತಲಾಗುತ್ತಿದೆ. ದಲಿತ ಕ್ರೈಸ್ತರ ಸಾಂಸ್ಕೃತಿಕ ಶೋಧ ಯೋಜನೆಯಡಿ ಸಂಶೋಧನಾತ್ಮಕ ಕೃತಿ ರಚಿಸುವ ಯೋಜನೆಯೂ ಇದರಲ್ಲಿ ಸೇರಿದೆ. ಯುವ ಕಾವ್ಯ ಅಭಿಯಾನ ಮತ್ತು ಚಕೋರ
ಕವಿ-ಕಾವ್ಯ ಸಂವಾದ ಯೋಜನೆಯಡಿ ಯುವ ಜನರನ್ನು ಸಾಹಿತ್ಯ ಕ್ಷೇತ್ರಕ್ಕೆ ಕರೆತರುವ ನಿಟ್ಟಿನಲ್ಲಿ ಹೊಸ ಅಭಿಯಾನವೂ ಇರಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಐದು ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ ನಡೆ  ಸಿದ್ದು, ಆ ಪೈಕಿ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಕಟಣೆ  ಗಳು ಹಾಗೂ ಯುವ ಜನರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕರೆ ತರಲು 2 ಪ್ರಮುಖ ಯೋಜನೆಗಳನ್ನು ಪರಿಚಯಿಸುತ್ತಿದೆ. 

ಬಂಗಾರದ ಎಲೆಗಳು: ಕಳೆದ 200 ವರ್ಷಗಳ ಅವಧಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಗುರುತಿಸಿಕೊಂಡ ಸಾಹಿತಿಗಳನ್ನು ಸ್ಮರಿಸುವುದರ ಜತೆಗೆ ಅವರಿಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿ ಒಳಗೊಂಡ “ಬಂಗಾರದ ಎಲೆಗಳು’ ಎನ್ನುವ ಸಾಹಿತಿಗಳ ಕೋಶ ಹೊರತರಲು ಯೋಜನೆ ರೂಪಿಸಿದೆ. ಅದಕ್ಕಾಗಿ ನಾಲ್ಕು ಮಂದಿ ಸಲಹಾ ಸಮಿತಿ ಸದಸ್ಯರು, ಇಬ್ಬರು ಸಂಪಾದಕರ ಇದ್ದು, 10 ಲೇಖಕರು ಕೆಲಸ ಮಾಡುತ್ತಾರೆ. ಇದು 2 ವರ್ಷದ ಅವಧಿಗೆ ಸಂಬಂಧಿಸಿದ ಯೋಜನೆಯಾಗಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಿದೆ.

ವಜ್ರದ ಬೇರುಗಳು: ಕನ್ನಡ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದ ಯೋಜನೆ ಇದಾಗಿದ್ದು, ಪ್ರಾಚೀನ ಸಾಹಿತ್ಯದ ಚಂಪು, ರಗಳೆ, ವಚನ, ಕೀರ್ತನೆ ಇಂತಹ ಪ್ರಕಾರಗಳು ಮತ್ತು ಹೊಸಗನ್ನಡಕ್ಕೆ ಸಂಬಂಧಿಸಿದಂತೆ ಕತೆ, ಕಾವ್ಯ, ಕಾದಂಬರಿ, ನಾಟಕ, ಪ್ರಬಂಧ, ಆತ್ಮಕತೆ ಸೇರಿದಂತೆ ಸುಮಾರು 25 ಪ್ರಕಾರಗಳನ್ನು ಗುರುತಿಸಲಾಗಿದೆ. ಈ ಪ್ರಕಾರಗಳ ತಾತ್ವಿಕ ವಿಚಾರಗಳು, ಚಿಂತನೆ, ವಿವರಣೆ, ಚರ್ಚೆ ಹಾಗೂ ಅದರ ಸ್ವರೂಪ, ಗುಣಲಕ್ಷಣಗಳು, ನಡೆದು ಬಂದ ಹಿನ್ನೆಲೆ, ಎಲ್ಲದರ ಬಗ್ಗೆಯೂ ಚರ್ಚೆ, ವಿವರಗಳನ್ನೊಳಗೊಂಡ ಪ್ರಕಟಣೆಗಳು ಹೊರಬರಲಿವೆ.

ಸಂಶೋಧನಾತ್ಮಕ ಕೃತಿ: ಈ ಯೋಜನೆಯು ದಲಿತ ಕ್ರೈಸ್ತ ಸಂಸ್ಕೃತಿ ಅಧ್ಯಯನಕ್ಕೆ ಸಂಬಂಧಿಸಿದ್ದಾಗಿದ್ದು, ರಾಜ್ಯದ ಮಂಗಳೂರು, ಉಡುಪಿ, ದಾವಣಗೆರೆ, ರಾಯಚೂರು, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಕೋಲಾರ, ರಾಮನಗರ, ಮೈಸೂರು ಸೇರಿದಂತೆ 30 ಜಿಲ್ಲೆಗಳಿಗೆ ಒಬ್ಬೊಬ್ಬರಂತೆ 30 ಮಂದಿ ಸಂಶೋಧಕರನ್ನು ಅಕಾಡೆಮಿ ಕಳುಹಿಸಿಕೊಡಲಿದೆ. ಈ ಸಂಶೋಧಕರು ದಲಿತ ಕ್ರೈಸ್ತರ ಸಂಸ್ಕೃತಿ ಅಧ್ಯಯನ ನಡೆಸಿ, ಸುಮಾರು 100ರಿಂದ 150 ಪುಟಗಳ ಒಂದು ಸಂಶೋಧನಾತ್ಮಕ ಕೃತಿ ಬರೆದುಕೊಡಲಿದ್ದಾರೆ. ಇದಕ್ಕೆ ನಾಲ್ಕು ಜನ ಸಂಪಾದಕರು ಇರಲಿದ್ದಾರೆ. ನಾಲ್ಕು ಹಿರಿಯ ಸಾಹಿತಿಗಳ ಸಲಹಾ ಸಮಿತಿ ಇರಲಿದೆ. ಈಗಾಗಲೇ ಸಂಶೋಧಕರನ್ನು ಆಹ್ವಾನಿಸಲಾಗಿದ್ದು, ಶೀಘ್ರವೇ ಯೋಜನೆ ಕಾರ್ಯಾರಂಭಗೊಳ್ಳಲಿದೆ.

Advertisement

ಯುವಕಾವ್ಯ ಅಭಿಯಾನ: ಇದು ಪಿಯುಸಿ ಮಕ್ಕಳಿಗೆ ಸಂಬಂಧಿಸಿದ ಯೋಜನೆಯಾಗಿದ್ದು ವಿದ್ಯಾರ್ಥಿಗಳಿಗೆ ಸಾಹಿತ್ಯದ ಅಭಿರುಚಿಯನ್ನು ಪರಿಚಯಿಸುವುದು ಈ ಯೋಜನೆ ಮುಖ್ಯ ಉದ್ದೇಶ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಯಾದಗಿರಿ, ಚಿತ್ರದುರ್ಗ, ರಾಯಚೂರು ಸೇರಿ ರಾಜ್ಯದ ಪ್ರತಿ 2 ಜಿಲ್ಲೆಗಳನ್ನೂ ಒಳಗೊಂಡಂತೆ ಯುವಕಾವ್ಯ ಅಭಿಯಾನ ನಡೆಯಲಿದೆ. ರಾಜ್ಯಾದ್ಯಂತ ಸುಮಾರು 15 ಕಡೆ ಈ ಕಾರ್ಯಕ್ರಮ ನಡೆಯಲು ಯೋಜಿಸಲಾಗಿದ್ದು, ಹಿರಿಯ ಕವಿಗಳನ್ನು ಕರೆಯಿಸಿ ವಿದ್ಯಾರ್ಥಿಗಳೊಂದಿಗೆ ಮುಖಾಮುಖೀ ಮಾಡಿಸಲಾಗುವುದು.

ಚಕೋರ ಕವಿ-ಕಾವ್ಯ ಸಂವಾದ: ಪ್ರತಿಯೊಂದು ಜಿಲ್ಲೆಗೆ ಒಂದೊಂದು ವೇದಿಕೆ ಸೃಷ್ಟಿಸಿ 30 ಅಭ್ಯರ್ಥಿಗಳನ್ನು ಸೇರಿಸಿ “ಚಕೋರ’ ಕವಿ-ಕಾವ್ಯ ಸಂವಾದ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ. ಅವರಿಗೆ ಪ್ರತಿ ತಿಂಗಳು 5 ಸಾವಿರ ರೂ.ಗಳ ಅನುದಾನ ನೀಡಲಾಗುವುದು. ಅವರು ಪ್ರತಿ ತಿಂಗಳು ವಿಭಿನ್ನ ರೀತಿಯ 3-4 ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಬೇಕಿದೆ.

ಸಾಹಿತ್ಯ ಕ್ಷೇತ್ರ ವನ್ನು ವೃಕ್ಷದ ಪರಿಕಲ್ಪನೆಯಲ್ಲಿ ಗ್ರಹಿಸುವುದರಿಂದ ಎಲೆ, ಬೇರುಗಳ ಹೆಸರು ನೀಡಲಾಗಿದೆ. ಬಂಗಾರ ಮತ್ತು ವಜ್ರ ಅತ್ಯಂತ ಮೌಲಿಕ ಎಂಬುದನ್ನು ಈ ಪರಿಕಲ್ಪನೆ ಪ್ರತಿನಿಧಿಸುತ್ತದೆ. 
 ●ಡಾ.ಅರವಿಂದ ಮಾಲಗತ್ತಿ, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಪರಿಷತ್ತು

●ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next