Advertisement

ಈಗ ಪರ್ಯಾಯ-ಆಗ ವಾದಿರಾಜರ ಪಂಚ ಶತಮಾನೋತ್ಸವ

11:50 PM Jan 22, 2021 | Team Udayavani |

ಉಡುಪಿ:  ಶ್ರೀಕೃಷ್ಣಮಠದಲ್ಲಿ ಈಗ ದೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿಯ ಪಂಚ ಶತಮಾನೋತ್ಸವದ ಕಾರ್ಯಕ್ರಮ ನಡೆಯುತ್ತಿದ್ದರೆ, 40 ವರ್ಷಗಳ ಹಿಂದೆ ಇದೇ ಸಮಯದಲ್ಲಿ ವಾದಿರಾಜ ಸ್ವಾಮಿಗಳ ಪಂಚಶತಮಾನೋತ್ಸವ ಸಮಾರಂಭ ಜರಗಿತ್ತು. 1980ರ ಜ. 18ರಿಂದ 31ರ ವರೆಗೆವಾದಿರಾಜ ಸ್ವಾಮಿಗಳ ಪಂಚ ಶತಮಾನೋತ್ಸವ ನಡೆದಿತ್ತು.

Advertisement

1522ರಲ್ಲಿ ದ್ವೆ„ವಾರ್ಷಿಕ ಪರ್ಯಾಯ ಪೂಜಾ ಪದ್ಧತಿಯನ್ನು ವಾದಿರಾಜರು ಆರಂಭಿಸಿದರು ಎಂಬ ಹಿನ್ನೆಲೆಯಲ್ಲಿ ಈಗ ಪರ್ಯಾಯ ಪಂಚಶತಮಾನೋತ್ಸವ ನಡೆಯುತ್ತಿದ್ದರೆ, ವಾದಿರಾಜ ಸ್ವಾಮಿಗಳು 1481ರಲ್ಲಿ ಕುಂದಾಪುರ ತಾಲೂಕಿನ ಹೂವಿನಕೆರೆಯಲ್ಲಿ ಅವತರಿಸಿದ ಹಿನ್ನೆಲೆ ಯಲ್ಲಿ 1980ರಲ್ಲಿ ವಾದಿರಾಜರ ಪಂಚ ಶತಮಾನೋತ್ಸವ ಸಮಾರಂಭ ಜರಗಿತ್ತು. ವಿಶೇಷವೆಂದರೆ ಎರಡೂ ಕಾರ್ಯಕ್ರಮ ಜನವರಿಯಲ್ಲಿ ಘಟಿಸಿದ್ದು. ಈಗ ಜ. 18ರಂದು ಮುಖ್ಯಮಂತ್ರಿ ಯಡಿಯೂರಪ್ಪ ನವರು ಪಾಲ್ಗೊಂಡಿದ್ದರೆ ಅಂದು (ವಾದಿರಾಜರ ಜಯಂತಿ ಜ.29ರಂದು) ನಟ ರಾಜ್‌ಕುಮಾರ್‌ ಪಾಲ್ಗೊಂಡಿದ್ದರು.

1980ರ ಕಾರ್ಯಕ್ರಮ ನಡೆದದ್ದು ಸೋದೆ ಮಠದ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದರ ನೇತೃತ್ವದಲ್ಲಿ. ಅದು ಅವರ ಮೂರನೆಯ ಪರ್ಯಾಯ ಪೂಜೆಯಾಗಿತ್ತು. ಜ. 18ರಂದು ಪರ್ಯಾಯ ಉತ್ಸವ ಹೊರತುಪಡಿಸಿದರೆ, ಜ. 19ರಿಂದ 31ರ ವರೆಗೆ ವಾದಿರಾಜರ ಪಂಚ ಶತಮಾನೋತ್ಸವವಾಗಿತ್ತು.

ಮಡಿಕೇರಿಯಲ್ಲಿ ನಡೆದ ಪವಾಡ! :

ಈಗ ಹೂವಿನಕೆರೆ ಗೌರಿಗದ್ದೆಯಲ್ಲಿ (ವಾದಿರಾಜರು ಜನಿಸಿದ ಗದ್ದೆ) ಇರುವ ವಾದಿರಾಜರ ತದ್ರೂಪಿ ವಿಗ್ರಹವನ್ನು ಮೈಸೂರಿನ ಶ್ರೀನಿವಾಸಾಚಾರ್ಯರಿಂದ ಮಾಡಿಸಿ ತರಲಾಗಿತ್ತು. ಇದು ತರುವಾಗ ನಡೆದ ಪವಾಡಸದೃಶ ಘಟನೆಯನ್ನು ವಿಗ್ರಹವನ್ನು ತಂದ ಪ್ರಸ್ತುತ ಶೀರೂರು ಮಠದ ಮ್ಯಾನೇಜರ್‌ ವಿಟuಲ ಭಟ್‌ ನೆನಪಿಸಿಕೊಳ್ಳುತ್ತಾರೆ.

Advertisement

ಮೈಸೂರಿನಿಂದ ಬಸ್‌ ಒಂದಕ್ಕೆ ಹಾಕಿ ತರುವಾಗ ಚಾಲಕ ಮಡಿಕೇರಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿ ಚಹಾ ಪಾನಕ್ಕೆ ಹೋಗಿದ್ದ. ಬಸ್ಸು ನಿಯಂತ್ರಣ ತಪ್ಪಿ ಹಿಂದಕ್ಕೆ ಹೋಯಿತು. ಹತ್ತು ಅಡಿ ಹಿಂದೆ ಹೋದರೆ 100 ಅಡಿ ಪ್ರಪಾತಕ್ಕೆ ಬಿದ್ದು ದೊಡ್ಡ ಅವಘಡ  ಆಗುವ ಸಾಧ್ಯತೆ ಇತ್ತು. ಆದರೆ ಬಸ್‌ ಸ್ವಲ್ಪ ದೂರ ಚಲಿಸಿ ಅಲ್ಲಿಯೇ ನಿಂತಿತು. ಪ್ರಯಾಣಿಕರಿಗೆ ಕುತೂಹಲವಾಗಿ ತಪಾಸಣೆ ನಡೆಸಿದರು. ಆಗ ವಾದಿರಾಜರ ಶಿಲಾ ವಿಗ್ರಹ ಇರುವುದು ತಿಳಿದುಬಂತು.

ವಿಜಯನಾಥ ಶೆಣೈ ಪಾತ್ರ :

ಜ. 29ರಂದು ಹೂವಿನಕೆರೆಯಲ್ಲಿ ಪೂಜೆ ಮಾಡಿ ಉಡುಪಿಯವರೆಗೆ ತರುವಾಗ ದಾರಿಯುದ್ದಕ್ಕೂ ಜನರು ಸಂಭ್ರಮದಲ್ಲಿ ಸ್ವಾಗತಿಸಿದ್ದು, ಜ.19ರಿಂದ 28ರ ವರೆಗೆ ನಡೆದ ರಾಜ್ಯ ಮಟ್ಟದ ಹರಿಕಥಾ ಸಮ್ಮೇಳನದ ಹಿಂದೆ ವಿಜಯನಾಥ ಶೆಣೈ ಅವರ ಪಾತ್ರ ಮಹತ್ವದ್ದಾಗಿತ್ತು ಎನ್ನುವುದನ್ನು ಸ್ಮರಿಸಿಕೊಳ್ಳುತ್ತಾರೆ ಆಗ ಶೆಣೈಯವರಿಗೆ ಸಹಾಯಕರಾಗಿದ್ದ, ದಸ್ತಾವೇಜು ಬರೆಹಗಾರ ರತ್ನಕುಮಾರ್‌.

ರಾಜ್‌ರನ್ನು ಸಾಗ ಹಾಕಿಸಿದ್ದ ಪೊಲೀಸರು! :

ರಾಜ್‌ಕುಮಾರ್‌ ಅವರು ಜೋಡುಕಟ್ಟೆಯಿಂದ ರಥಬೀದಿವರೆಗೆ ನಡೆದು ಬರಲು ನಿರ್ಧರಿಸಿದಾಗ ಜನಸಂದಣಿಯನ್ನು ನಿಯಂತ್ರಿಸಲಾಗದ ಪೊಲೀಸರು  ಅವರನ್ನು ಆದಷ್ಟು ಬೇಗ “ಸಾಗ ಹಾಕಲು’ ಸಲಹೆ ನೀಡಿದರು. ಆಗ ಅವರನ್ನು ವಾಹನದಲ್ಲಿ ಕಳುಹಿಸಲಾಯಿತು. ರಾಜಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್‌ಕುಮಾರ್‌ ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದ್ದರು. ಅಂದು ಬಡಗುಮಾಳಿಗೆಯಲ್ಲಿ ಪೂಜೆಗೊಂಡ ಆ ವಿಗ್ರಹವನ್ನು ಬಳಿಕ ಚೆನ್ನೈ ಟಿ. ನಗರದಲ್ಲಿ ದಾನಿಯೊಬ್ಬರು ಸೋದೆ ಮಠಕ್ಕೆ ದಾನ ಕೊಟ್ಟ ಸ್ಥಳದಲ್ಲಿ ನಿರ್ಮಿಸಿದ ಮಠದಲ್ಲಿ ಶ್ರೀವಿಶೊÌàತ್ತಮತೀರ್ಥರು ಪ್ರತಿಷ್ಠಾಪನೆ ನಡೆಸಿದರು. ಈಗಲೂ ಅಲ್ಲಿ ನಿತ್ಯ ಪೂಜೆ ಸಲ್ಲಿಕೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next