ಕಲಬುರಗಿ: ದೇಶದಲ್ಲಿ ಸ್ಥಾಪಿತಗೊಂಡಿರುವ ಪಂಚಪೀಠಗಳು ಮಾನವ ಧರ್ಮ ಕಲ್ಯಾಣಕ್ಕಾಗಿಯೇ ಇದ್ದು, ಅವುಗಳಿಂದ ಧರ್ಮ ಹಾಗೂ ಜೀವನ ಶುದ್ಧಿ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಉಜ್ಜಯಿನಿ ಪೀಠದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಶುಕ್ರವಾರ ಚಿತ್ತಾಪುರ ತಾಲೂಕಿನ ರೇವಗ್ಗಿ ಗ್ರಾಮದ ರೇವಣಸಿದ್ದೇಶ್ವರ ಗುಡ್ಡದ ದೇಗುಲದಲ್ಲಿ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು. ಪಂಚಪೀಠಗಳು ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗಿಲ್ಲ. ಜಗತ್ತಿನ ಮಾನವ ಧರ್ಮ ಉದ್ಧಾರಕ್ಕಾಗಿ ಅವು ಶ್ರಮಿಸುತ್ತಿವೆ.
ಇದನ್ನು ಭಕ್ತರು ತಿಳಿದು ನಡೆಯುವಂತಾಗಬೇಕು ಎಂದರು. ಜಗತ್ತಿನ ದೃಷ್ಟಿಯಲ್ಲಿ ಭಾರತ ತುಂಬಾ ಧಾರ್ಮಿಕವಾಗಿ ಶ್ರದ್ಧೆಯಿಂದ ಇದೆ. ಇಲ್ಲಿ ಸಾವಿರಾರು ದೇವಾಲಯಗಳಿವೆ. ಸಣ್ಣ ಸಣ್ಣ ಗ್ರಾಮದಲ್ಲೂ ದೇಗುಲಗಳಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಜನರು ದೇವರಿಗಿಂತ ಹೆಚ್ಚಾಗಿ ದೇಹವನ್ನು ಪ್ರೀತಿಸುತ್ತಾರೆ.
ಆದರೆ ನಮ್ಮ ಜನರು ದೇಹವನ್ನು ದಂಡಿಸಿ ದೇವರನ್ನು ಭಕ್ತಿಯಿಂದ ಪೂಜಿಸುತ್ತಾರೆ. ದೈವ ಮತ್ತು ಭಕ್ತಿ ಪ್ರಧಾನವಾದ ದೇಶ ನಮ್ಮದಾಗಿದೆ ಎಂದರು. ಜಗತ್ತಿನ ಎಲ್ಲಾ ದೇಶದ ದೇವರುಗಳನ್ನು ಒಂದು ತಕ್ಕಡಿಯಲ್ಲಿ ಹಾಗೂ ಭಾರತ ದೇಶದ ದೇವರನ್ನು ಒಂದು ತಕ್ಕಡಿಯಲ್ಲಿ ತೂಗಿದರೆ ಭಾರತದ ದೇವರುಗಳದ್ದೇ ಮೇಲುಗೈ ಆಗುತ್ತದೆ.
ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರ ನಮ್ಮ ಭಾರತ ಎಂದರು. ಎಲ್ಲಿಯವರೆಗೆ ಜನ ಹೆತ್ತ ತಂದೆ- ತಾಯಿ, ನೆಲ-ಜಲ, ಭಾಷೆ-ಧರ್ಮಗಳನ್ನು ಪೂಜಿಸುತ್ತಾರೆಯೋ ಅಲ್ಲಿಯವರೆಗೆ ನಮ್ಮ ದೇಶ ಅಜರಾಮರವಾಗಿರುತ್ತದೆ ಎಂದು ಹೇಳಿದರು. ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ್ ಮಾತನಾಡಿದರು.
ಸೇಡಂ ಸಹಾಯಕ ಆಯುಕ್ತ ಭೀಮಾಶಂಕರ ತೆಗ್ಗಳ್ಳಿ ದಂಪತಿ ಮತ್ತು ತಾಯಿ ಮಕ್ಕಳನ್ನು ಉಜ್ಜಯನಿ ಶ್ರೀಗಳು ಸನ್ಮಾನಿಸಿದರು. ಇದೇ ವೇಳೆ ಭೀಮಾಶಂಕರ ಅವರಿಗೆ ಕಾಯಕಯೋಗಿ, ರೇವಣಸಿದ್ದ ಸಿರಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಸಚಿವರಾದ ರುದ್ರಪ್ಪ ಲಮಾಣಿ, ಡಾ| ಶರಣಪ್ರಕಾಶ ಪಾಟೀಲ ಹಾಗೂ ಜಿಲ್ಲೆಯ ಎಲ್ಲಾ ಹರ ಗುರು ಚರ ಮೂರ್ತಿಗಳು, ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ರೇವಣಸಿದ್ದಪ್ಪ ಮಾಸ್ಟರ್, ರೇವಣಸಿದ್ದಪ್ಪ ಸಾತನೂರು, ಸಿದ್ದು ಬಾನರ್ ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.