ಪಣಂಬೂರು: ಪಶ್ಚಿಮ ಘಟ್ಟ ಪ್ರದೇಶದಿಂದ ಮಳೆ ನೀರು ಹರಿದು ಬರುವ ನೈಸರ್ಗಿಕ ಪ್ರದೇಶವಾದ ಜೋಕಟ್ಟೆ ರಸ್ತೆ ಬದಿ, ಪೇಜಾವರ ತಿರುವಿನಲ್ಲಿ ಎಕರೆ ಗಟ್ಟಲೆ ಪ್ರದೇಶದಲ್ಲಿರುವ ಕಾಂಡ್ಲಾ ವನಕ್ಕೆ ಸಂಚಕಾರ ಬರುವ ಆತಂಕ ತಲೆದೋರಿದೆ.
ವಿಶೇಷ ಆರ್ಥಿಕ ವಲಯ ಈ ಭಾಗದಲ್ಲಿ ಗರಿಗೆದರಿದ ಬಳಿಕ ಅಭಿವೃದ್ಧಿಯ ಪ್ರಮಾಣ ಹೆಚ್ಚಾಗಿದ್ದು, ಅಳಿದುಳಿದ ಮಣ್ಣು, ತ್ಯಾಜ್ಯ ಕಾಂಡ್ಲಾ ವನದ ಬುಡಕ್ಕೆ ತಂದು ಸುರಿಯಲಾಗುತ್ತಿದೆ. ಸಿಆರ್ ಝಡ್ ನಿರ್ಬಂಧಿತ ಪ್ರದೇಶವಾಗಿದ್ದು, ಕಾಂಡ್ಲಾವನ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ ಎಕರೆ ಗಟ್ಟಲೆ ಪ್ರದೇಶ ಇದೀಗ ತ್ಯಾಜ್ಯ ರಾಶಿ ತುಂಬಿ ಸಮತಟ್ಟು ಮಾಡಲಾಗಿದೆ. ರಾತೋರಾತ್ರಿ ವಿವಿಧೆಡೆಯಿಂದ ಲಾರಿಗಳಲ್ಲಿ ಕಟ್ಟಡ, ಕಸ ತ್ಯಾಜ್ಯ ತಂದು ಸುರಿಯಲಾಗುತ್ತದೆ. ಮಾಂಸಗಳ ತ್ಯಾಜ್ಯಗಳೂ ಇಲ್ಲಿನ ಕಾಂಡ್ಲಾ ವನದ ಮಧ್ಯೆ ಎಸೆಯುತ್ತಿತ್ತು. ಇದರಿಂದಾಗಿ ಪ್ರದೇಶವೆಲ್ಲಾ ದುರ್ವಾಸನೆಯಿಂದ ಕೂಡಿದೆ.
ನದಿ ನೀರು ಮಾಲಿನ್ಯ ಪಶ್ಚಿಮ ಘಟ್ಟ ಪ್ರದೇಶದಿಂದ ಬರುವ ಮಳೆ ನೀರು ಜೋಕಟ್ಟೆ, ಕುಡುಂಬೂರು, ತೋಕೂರು ಆಗಿ ಫಲ್ಗುಣಿ ನದಿಯನ್ನು ಸೇರುತ್ತದೆ. ಒಂದು ಕಾಲಕ್ಕೆ ಸ್ಥಳೀಯರು ದೋಣಿಗಳಲ್ಲಿ ಸಂಚರಿಸಿ ಮೀನು ಹಿಡಿಯುತ್ತಿದ್ದ ಈ ಉಪ ಹಳ್ಳಗಳು ಇಂದು ಮಾಲಿನ್ಯಕ್ಕೆ ತುತ್ತಾಗಿ ನೀರಿನ ಬಣ್ಣ ಕಪ್ಪಾಗಿದೆ. ನೀರಿಗಿಳಿದರೆ ರೋಗ ಭೀತಿ ಎದುರಾಗಿದೆ. ಅಪರೂಪದ ಮೀನು ಸಂತತಿ ಇಲ್ಲವಾಗಿದೆ. ಕೈಗಾರಿಕೆ ಪ್ರದೇಶಗಳ ಲ್ಲಿ ತ್ಯಾಜ್ಯ ಸಂಸ್ಕರಣ ಘಟಕದ ಕೊರತೆ ಪ್ರಮುಖ ಸಮಸ್ಯೆಯಾಗಿದೆ.
ಇದರ ನಡುವೆ ಬೈಕಂಪಾಡಿ ಕೈಗಾರಿಕೆ ಮಾರ್ಗವಾಗಿ ಜೋಕಟ್ಟೆ ಬಲ ಬದಿ ರಸ್ತೆ ಬದಿಯುದ್ದಕ್ಕೂ ಇದ್ದ ಕಾಂಡ್ಲಾವನ ರಸ್ತೆ ವಿಸ್ತರಣೆಗೆ ಬಲಿಯಾದರೆ ಇದೀಗ ಮತ್ತಷ್ಟು ಮಣ್ಣು ತುಂಬಿಸುವ ಸಂದರ್ಭ ಸಮಾಧಿಯಾಗುತ್ತಿದೆ.
ಪೇಜಾವರ ಭಾಗದಲ್ಲಿ ವಾಸುವ ಗ್ರಾಮಸ್ಥರು ಒಂದು ಕಾಲದಲ್ಲಿ ಮಳೆಯ ಸಂದರ್ಭ ದೋಣಿ ಪ್ರಯಾಣ ಸಾಮಾನ್ಯವಾಗಿತ್ತು. ಈ ಪ್ರದೇಶವೆಲ್ಲ ಮುಳುಗಡೆಯಾಗುತ್ತಿತ್ತು. ಅತ್ಯಂತ ಪರಿಶುದ್ಧ ನೀರು ಪಶ್ಚಿಮ ಘಟ್ಟದಿಂದ ಹರಿದು ಸಮುದ್ರ ಸೇರುತ್ತಿತ್ತು. ಕಾಂಡ್ಲಾ ವನ ಮಣ್ಣಿನ ಕೊರತೆವಾಗದಂತೆ ನೈಸರ್ಗಿಕ ತಡೆಗೋಡೆಯಾಗಿತ್ತು. ವಿವಿಧ ಬಗೆಯ ಮೀನು, ಸಿಗಡಿ, ಏಡಿಗಳಿಗೆ ಸಂತತಿಗೆ ರಕ್ಷಣೆಯಾಗಿತ್ತು. ಆದರೆ ಇದೀಗ ಅಭಿವೃದ್ಧಿಯ ನೆಪದಲ್ಲಿ ರಸ್ತೆ ವಿಸ್ತರಣೆ ಜತೆಗೆ ಅಳಿದುಳಿದ ತ್ಯಾಜ್ಯ ರಾಶಿ ಹಾಕುವ ಪ್ರಮಾಣ ಈ ಭಾಗದಲ್ಲಿ ಹೆಚ್ಚುತ್ತಿದೆ. ಸಿಆರ್‌ಝಡ್ ನಿಯಮಕ್ಕೂ ಆದ್ಯತೆ ನೀಡಲಾಗಿಲ್ಲ.
ಕರಾವಳಿ ಹಸುರು ಕವಚ ಜಾರಿಯಾಗಲಿ
2010ರಲ್ಲಿ ಕರಾವಳಿ ಹಸುರು ಕವಚ ಯೋಜನೆ ರೂಪಿಸಲಾಗಿತ್ತು. ಹೆಚ್ಚಾಗಿ ಕಾಂಡ್ಲಾವನ ಇರುವ ಪ್ರದೇಶ ಜೀವ ವೈವಿಧ್ಯ ಪ್ರದೇಶ ಎಂದು ಘೋಷಣೆ ಮಾಡಲು ಪೂರ್ವ ತಯಾರಿ ನಡೆದಿತ್ತಾದರೂ ಇದುವರೆಗೆ ಈಡೇರಿಲ್ಲ.
ಎರಡು ವರ್ಷಗಳ ಹಿಂದೆ ಕೇಂದ್ರ ಸರಕಾರ ವಿದೇಶಿ ಹಣಕಾಸಿ ನಿಧಿಯಿಂದ ಕರಾವಳಿ ಭಾಗದಲ್ಲಿ ಹಸುರು ವಲಯ ಕಾಪಾಡಲು ಅರಣ್ಯ ಇಲಾಖೆ, ಸಿಆರ್‌ಝಡ್ ವಿಭಾಗದ ಮೂಲಕ ಮುಂದಾಗಿತ್ತು. ಆದರೆ ಹಣಕಾಸಿನ ಸಮಸ್ಯೆಯಿಂದ ವಿಳಂಬವಾಗಿದೆ. ಅಂದಾಜು 60 ಲಕ್ಷ ರೂ. ಮೊದಲ ಕಂತಿನಲ್ಲಿ ಆಗಬೇಕಿದ್ದ ಬಿಡುಗಡೆಗೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಐದು ಮೀಟರ್ ಉದ್ದ ಬೆಳೆದಿರುವ ಒಂದು ಕಾಂಡ್ಲಾ ಗಿಡ ದೊಡ್ಡದಾದ ಮರಕ್ಕೆ ಸಮಾನವಾಗಿದ್ದು, ಇಂಗಾಲದ ಡೈ ಆಕ್ಸೈಡ್ ಅಪಾರವಾಗಿ ಹೀರಿಕೊಂಡು, ಮಣ್ಣಿನ ಸವಕಳಿ ತಡೆಯುವ ಅಪರೂಪದ ಗಿಡವಾಗಿದೆ. ರಾಜ್ಯದ ಕಾಂಡ್ಲಾ ಪ್ರಭೇದ ಸಸ್ಯ ರಾಶಿಯಾಗಿ ಸರಕಾರ ಘೋಷಣೆ ಮಾಡಿ ಈ ಭಾಗದಲ್ಲಿ ನೈಸರ್ಗಿಕ ಪ್ರದೇಶಕ್ಕೆ ತಂತಿ ಬೇಲಿ ನಿರ್ಮಿಸಿ ರಕ್ಷಣೆ ಒದಗಿಸಬೇಕಿದೆ.
ನಮ್ಮದು ಗ್ರಾ.ಪಂ. ವ್ಯಾಪ್ತಿಯ ಅಧಿಕಾರವಾದರೂ ಸಿಆರ್‌ಝಡ್ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ತಂದು ಹಾಕುವಾಗ ಹಲವಾರು ಬಾರಿ ತಡೆದು ದಂಡ ವಿಧಿಸಿ ದ್ದೇವೆ. ತ್ಯಾಜ್ಯ ಸಹಿತ ಲಾರಿಗಳನ್ನು ಹಿಂದೆ ಕಳಿಸಿದ್ದೇವೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಕಾಂಡ್ಲಾವನ ಉಳಿಸುವುದು ಅಗತ್ಯವಾಗಿದೆ.
-ಅಬ್ದುಲ್ ಅಸಫ್, ಪಿಡಿಒ, 62ನೇ ತೋಕೂರು
ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮಣ್ಣು ತುಂಬಿಸುವುದು ಶಿಕ್ಷಾರ್ಹ ಅಪರಾಧ. ವಾಹನ ಮುಟ್ಟುಗೋಲು ಹಾಕಿ ದಂಡ ವಿಧಿಸಬಹುದು. ಕಾಂಡ್ಲಾವನ ಸಂರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದೇವೆ. ಎಂಆರ್ ಪಿಎಲ್ ಜತೆಗೂಡಿ ಸಿಎಸ್‌ಆರ್ ನಿಧಿಯಲ್ಲಿ ಇಲ್ಲಿನ ಅಪರೂಪದ ಕಾಂಡ್ಲಾ ಪ್ರದೇಶಕ್ಕೆ ತಡೆ ಬೇಲಿ ಸಹಿತ ಸ್ವಚ್ಛತೆ ಕಾಪಾಡಲು ಯೋಜನೆ ರೂಪಿಸಿದ್ದೇವೆ. ಶೀಘ್ರ ಅನುಷ್ಠಾನಕ್ಕೆ ತರುತ್ತೇವೆ. –
ಡಾ| ದಿನೇಶ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು