Advertisement

ಪಣಂಬೂರು ಬೀಚ್‌ : ವಿವಿಧೆಡೆ ತ್ಯಾಜ್ಯ ರಾಶಿ, ಮೂಲಸೌಕರ್ಯಗಳಿಲ್ಲದೆ ಸಂಕಷ್ಟ

05:45 PM Mar 12, 2022 | Team Udayavani |

ಪಣಂಬೂರು : ಅಂತಾರಾಷ್ಟ್ರೀಯ ಬೀಚ್‌ ಆಗಿರುವ ಪಣಂಬೂರಿನ ಕಡಲ ಕಿನಾರೆ ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ಬೀಚ್‌ನ ಪ್ರವೇಶ ದ್ವಾರದಲ್ಲೇ ತ್ಯಾಜ್ಯ ರಾಶಿ, ಪಾರ್ಕಿಂಗ್‌ ಸ್ಥಳದಲ್ಲಿ ಮಧ್ಯ, ನೀರಿನ ಬಾಟಲಿಗಳ ರಾಶಿ, ಬೀಚ್‌ ತುಂಬಾ ಪ್ಲಾಸ್ಟಿಕ್‌ ತುಂಡುಗಳು ಗಾಳಿಗೆ ಹಾರಾಡುತ್ತಿವೆ.ಇಲ್ಲಿನ ಹೈಮಾಸ್ಟ್‌ ದೀಪದ ಸುತ್ತಲೂ ತ್ಯಾಜ್ಯ ತುಂಬಿ ತೊಟ್ಟಿಯಂತಾಗಿದೆ.

Advertisement

ಸಮರ್ಪಕ ಮೂಲಸೌಕರ್ಯಗಳು ಇಲ್ಲದೆ ಪ್ರವಾಸಿಗರು ಸಂಕಷ್ಟ ಎದುರಿಸುವಂತಾಗಿದೆ. ಸ್ವಾಗತ ಕಮಾನು ತೆಗೆದು ಹಾಕಿದ್ದು, ಮೂಲೆ ಸೇರಿದೆ. ಜತೆಗೆ ಬೀಚ್‌ ಅಪಾಯಕಾರಿ, ಈಜಬೇಡಿ ಎಂಬ ಫಲಕಗಳು ಉದ್ದ ಸಾಲಿನ ಅಂಗಡಿಗಳ ಹಿಂದೆ ಮರೆಯಾಗಿವೆ. ಹೀಗಾಗಿ ದೂರದ ಊರಿನ ಪ್ರವಾಸಿಗರಿಗೆ ಬೀಚ್‌ ಮಾಹಿತಿಗಳು ಗೊತ್ತಾಗುತ್ತಿಲ್ಲ. ಬೀಚ್‌ ನಿರ್ವಹಣೆಗೆ ಇನ್ನೂ ಯಾರಿಗೂ ನೀಡದೇ ಇರುವುದರಿಂದ ಈ ಹಿಂದಿನ ಬೀಚ್‌ ರಕ್ಷಣ ಸಿಬಂದಿ ಸಾವಿರಾರು ಪ್ರವಾಸಿಗರು ಬರುವಾಗ ಸುರಕ್ಷೆಯನ್ನು ನೋಡಿಕೊಳ್ಳುತ್ತಿದ್ದಾರೆ. ಸುರಕ್ಷೆಯ ಜತೆಗೆ, ಅಮಲು ಪದಾರ್ಥ ವ್ಯವಹಾರ ತಡೆಗೆ ಸಿಸಿ ಕೆಮರಾ ಕೆಟ್ಟು ಹೋಗಿದೆ. ಇನ್ನೊಂದೆಡೆ ಗುತ್ತಿನ ಮನೆಯ ಸೌಂದರ್ಯ ಮಾಸಿ ಹೋಗಿದ್ದು, ಹೆಂಚುಗಳು ಹಾರಿ ಹೋಗಿವೆ. ಇದಕ್ಕೆ ಅಳವಡಿಸಲಾದ ಕಬ್ಬಿಣದ ಬೀಮ್‌ಗಳು ತುಕ್ಕು ಹಿಡಿದಿದೆ. ರಾಜ್ಯದ ಪ್ರಮುಖ ಬೀಚ್‌ನಲ್ಲಿ ಒಂದಾಗಿರುವ ಪಣಂಬೂರು ಬೀಚ್‌ಗೆ ಶನಿವಾರ, ರವಿವಾರ, ಸರಕಾರಿ ರಜಾದಿನಗಳ ಸಹಿತ ವಿವಿಧ ದಿನಗಳಲ್ಲಿ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಪಣಂಬೂರು ಬೀಚ್‌ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಬೇಕಿದೆ.

ಇದನ್ನೂ ಓದಿ : ಇಜಾಜ್ ಜೈಲಿನಿಂದ ಹೊರಬಂದರೆ ಕೊಚ್ಚಿ ಹಾಕುತ್ತೇವೆ: ಮುತಾಲಿಕ್ ವಿವಾದ

ಗೋಕರ್ಣ ಮಾದರಿ ಬೀಚ್‌ ಅಭಿವೃದ್ಧಿ
ಪಣಂಬೂರು ಬೀಚ್‌ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಪಡಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಗೋಕರ್ಣ ಮಾದರಿ ಬೀಚ್‌ ಅಭಿವೃದ್ಧಿ ಪಡಿಸಬೇಕೆಂಬ ಕನಸಿದೆ. ಮೂಲಸೌಕರ್ಯ, ಬೋಟಿಂಗ್‌, ಮನೋರಂಜನೆಯಂತಹ ಕಾರ್ಯಕ್ರಮಗಳು ನಿರಂತರವಾಗಿ ಪ್ರವಾಸಿಗರಿಗೆ ಸಿಕ್ಕಾಗ ಆಕರ್ಷಿತರಾಗುತ್ತಾರೆ. ಈ ನಿಟ್ಟಿನಲ್ಲಿ ನನ್ನ ಪ್ರಯತ್ನ ಮಾಡುತ್ತೇನೆ.
– ಡಾ| ಭರತ್‌ ಶೆಟ್ಟಿ ವೈ., ಶಾಸಕರು, ಮಂಗಳೂರು ಉತ್ತರ

ವಿಲೇವಾರಿಗೆ ಅಗತ್ಯ ಕ್ರಮ
ಶನಿವಾರ, ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವುದರಿಂದ ಹೆಚ್ಚಿನ ತ್ಯಾಜ್ಯ, ಬಾಟಲಿ ರಾಶಿ ಬೀಳುತ್ತಿದ್ದು, ದಿನದಿಂದ ದಿನಕ್ಕೆ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸಮುದ್ರ ದಡದಲ್ಲಿ ಕಸವನ್ನು ಆಗಿಂದಾಗ್ಗೆ ಸ್ವತ್ಛಗೊಳಿಸುತ್ತಿದ್ದೇವೆ. ಪಾಲಿಕೆ ಸಹಕಾರದಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.
– ಮಾಣಿಕ್ಯ, ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next