Advertisement

53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ; ಸ್ಪ್ಯಾನಿಷ್‌ ಚಿತ್ರಕ್ಕೆ ಗೋಲ್ಡನ್‌ ಪೀಕಾಕ್‌ ಪ್ರಶಸ್ತಿ

09:47 PM Nov 28, 2022 | Team Udayavani |

ಪಣಜಿ: ಎಂಟು ದಿನಗಳ ಕಾಲ ನಡೆದ ಪ್ರಸಕ್ತ 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಗತ್ತಿನ 78 ದೇಶಗಳ 282 ಚಲನಚಿತ್ರಗಳು ಪ್ರದರ್ಶನಗೊಂಡಿದೆ. ಇದರಲ್ಲಿ 97 ಭಾರತೀಯ ಚಲನಚಿತ್ರಗಳು ಪ್ರದರ್ಶನಗೊಂಡಿದೆ. ಇಲ್ಲಿ ಕೇವಲ ಮನೋರಂಜನೆ ಮಾತ್ರವಲ್ಲದೆಯೇ ಹಲವು ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಮಂತ್ರಿ ಅನುರಾಗ್ ಠಾಕೂರ್ ಅಭಿಪ್ರಾಯಪಟ್ಟರು.

Advertisement

ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು. ಈ ಬಾರಿ ಚಲನಚಿತ್ರೋತ್ಸವದಲ್ಲಿ 75 ಯಂಗ್ ಮೇಕರ್ ಗಳು ತಮ್ಮ ಕ್ರಿಯೇಟಿವಿಟಿಯನ್ನು ಪ್ರದರ್ಶಿಸಿದ್ದಾರೆ. ಇಂಡಿಯನ್ ಫಿಲ್ಮ ಪರ್ಸನಾಲಿಟಿ ಅವಾರ್ಡ್ ಪಡೆದ ಬಾಲಿವುಡ್ ನಟ ಚಿರಂಜೀವಿ ರವರನ್ನು ನಾನು ಅಭಿನಂದಿಸುತ್ತೇನೆ. ಕಳೆದ 40 ಕ್ಕೂ ಹೆಚ್ಚು ವರ್ಷಗಳಲ್ಲಿ ಚಿರಂಜೀವಿ ರವರು ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಭಾರತೀಯ ಸಿನೆಮಾಗಳ ಶಕ್ತಿ ಎಷ್ಟಿದೆ ಎಂದರೆ ವಿದೇಶಗಳಲ್ಲಿಯೂ ಕೂಡ ನಮ್ಮ ದೇಶದ ಚಲನಚಿತ್ರಗಳು ಹೆಸರು ಮಾಡಿದೆ. ಪ್ರಸಕ್ತ ಚಲನಚಿತ್ರೋತ್ಸವ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಇಂಡಿಯನ್ ಪರ್ಸನಾಲಿಟಿ ಅವಾರ್ಡ್ ಸ್ವೀಕರಿಸಿದ ಮೆಗಾಸ್ಟಾರ್ ಚಿರಂಜೀವಿ ಮಾತನಾಡಿ, ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಆದರೆ ಇಂದು ನನಗೆ ಚಲನಚಿತ್ರ ಕ್ಷೇತ್ರ ಹಾಗೂ ಜನತೆ ಎಲ್ಲವನ್ನೂ ತಂದುಕೊಟ್ಟಿದ್ದಾರೆ. ನಾನು ರಾಜಕೀಯ ಕ್ಷೇತ್ರದಿಂದ ಚಲನಚಿತ್ರ ಕ್ಷೇತ್ರಕ್ಕೆ ಮತ್ತೆ ವಾಪಸ್ಸಾದಾಗ ಜನತೆ ನನಗೆ ಈ ಹಿಂದಿನಂತೆಯೇ ಪ್ರೀತಿ ನೀಡಿದ್ದಾರೆ. ಇದನ್ನು ನಾನು ಎಂದೂ ಮರೆಯುವುದಿಲ್ಲ ಎಂದು ಈ ಮೂಲಕ ತಮಗೆ ಭಾಷೆ ನೀಡುತ್ತೇನೆ. ನನ್ನನ್ನು ಈ ಮಟ್ಟಕ್ಕೆ ತಲುಪಿಸಿದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಮಾತನಾಡಿ, ಗೋವಾ ರಾಜ್ಯ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ಗೋವಾ ರಾಜ್ಯವನ್ನು ಪ್ರತಿ ವರ್ಷ ಸಜ್ಜುಗೊಳಿಸಲಾಗುತ್ತದೆ. ಈ ಮೂಲಕ ಚಲನಚಿತ್ರ ಕಲಾವಿದರನ್ನು, ಪ್ರತಿನಿಧಿಗಳನ್ನು ಆಕರ್ಷಿಸಲಾಗುತ್ತದೆ. ಪ್ರಸಕ್ತ ಬಾರಿ ವಿವಿಧ ದೇಶಗಳ 12000 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ವರ್ಷದಿಂದ ವರ್ಷಕ್ಕೆ ಚಲನಚಿತ್ರೋತ್ಸವ ಹೊಸತನದಿಂದ ಕಂಗೊಳಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಬಾಲಿವುಟ್ ನಟ ಅಕ್ಷಯಕುಮಾರ್, ಖುಷ್ಬು, ಸೇರಿದಂತೆ ಚಲನಚಿತ್ರ ಕ್ಷೇತ್ರದ ಕಲಾವಿದರು ಉಪಸ್ಥಿತರಿದ್ದರು. ದೇಶ-ವಿದೇಶಿಯ ಚಲನಚಿತ್ರ ಕಲಾವಿದರಿಗೆ ಉತ್ತಮ ನಿರ್ದೇಶಕ, ಉತ್ತಮ ನಟ, ಉತ್ತಮ ನಟಿ, ಸ್ಪೆಶಲ್ ಜ್ಯೂರಿ ಅವಾರ್ಡ್, ಗೋಲ್ಡನ್ ಪಿಕಾಕ್ ಅವಾರ್ಡ್ ನೀಡಿ ಸನ್ಮಾನಿಸಲಾಯಿತು. ಈ ಮೂಲಕ 8 ದಿನಗಳ ಕಾಲ ನಡೆದ 53 ನೇಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಇಫಿ) ತೆರೆ ಕಂಡಿತು.

Advertisement

ಸ್ಪ್ಯಾನಿಷ್‌ ಚಿತ್ರ ಐ ಹ್ಯಾವ್‌ ಎಲೆಕ್ಟ್ರಿಕ್‌ ಡ್ರೀಮ್ಸ್‌ ಗೆ ಗೋಲ್ಡನ್‌ ಪೀಕಾಕ್‌ ಪ್ರಶಸ್ತಿ

ಇಫಿ 53 ನೇ ಆವೃತ್ತಿಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೋಲ್ಡನ್‌ ಪೀಕಾಕ್‌ ಅನ್ನು ಸ್ಪ್ಯಾನಿಷ್‌ ಭಾಷೆಯ ಐ ಹ್ಯಾವ್‌ ಎಲೆಕ್ಟ್ರಿಕ್‌ ಡ್ರೀಮ್ಸ್‌ ಗೆದ್ದುಕೊಂಡಿದೆ. ಇದೇ ಚಿತ್ರದ ನಟಿ ಡೆನಿಯಲ್‌ ಮಾರ್ಟಿನ್‌ ನವೊರಾ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಪರ್ಸಿಯನ್‌ ಭಾಷೆಯ ನೋ ಎಂಡ್‌ ಚಿತ್ರವು ಎರಡು ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಲ್ವರ್‌ ಪೀಕಾಕ್‌ ಅನ್ನು ಇರಾನಿನ ನಾದಾರ್‌ ಸೆವಿಯರ್‌ ಪಾಲಾದರೆ, ಅತ್ಯುತ್ತಮ ನಟ ಪ್ರಶಸ್ತಿಗೆ ಅದೇ ಚಿತ್ರದ ವಾಹೆಬ್‌ ಮೊಬೆಸ್ಸರಿ ಭಾಜನರಾಗಿದ್ದಾರೆ.

ಚೊಚ್ಚಲ ನಿರ್ದೇಶನದ ಚಿತ್ರ ಪ್ರಶಸ್ತಿ ಬಿಹೆಂಡ್‌ ದಿ ಹೆಸ್ಟಾಕ್ಸ್‌ ನ ಅಸಿಮಿನಾ ಪ್ರೋಡ್ರೂ ಅವರಿಗೆ ಸಿಕ್ಕರೆ, ವಿಶೇಷ ಪ್ರಶಸ್ತಿಗೆ ತೆಲುಗಿನ ಪ್ರವೀಣ್‌ ಕಂದ್ರೆಗುಲ ರ ಸಿನಿಮಾ ಬಂಡಿ ಗೆ ಲಭಿಸಿದೆ. ತೀರ್ಪುಗಾರರ ಪ್ರಶಸ್ತಿಯನ್ನು ಫಿಲಿಫೈನ್ಸ್‌ ನ ಲಾವ್‌ ಡಯಾಝ್ ಅವರ ನಿರ್ದೇಶನದ ‘ವೆನ್‌ ವೇವ್ಸ್‌ ಆರ್‌ ಗಾನ್‌’ ಚಿತ್ರ ಪಡೆದುಕೊಂಡಿದೆ.

ಐಸಿಎಫ್ಟಿ-ಯುನೆಸ್ಕೊ ಗಾಂಧಿಯನ್‌ ಪ್ರಶಸ್ತಿಯನ್ನು ಪರ್ಸಿಯನ್‌ ಭಾಷೆಯ ಪಾಯಮ್‌ ಎಕ್ಸಂದಾರಿ ನಿರ್ದೇಶನದ ನಗೇìಸ್‌ ಚಿತ್ರವು ಪಡೆದುಕೊಂಡಿದೆ. ಈ ವಿಭಾಗದಲ್ಲಿ ಕನ್ನಡದ ನಟಿ ಗ್ರೀಷ್ಮಾ ನಟಿಸಿದ ನಾನು ಕುಸುಮ ಚಿತ್ರವೂ ಪ್ರಶಸ್ತಿಗೆ ಸೆಣಸಿತ್ತು.

ಈ ಬಾರಿಯ ಅಂತಾರಾಷ್ಟ್ರೀಯ ಚಿತ್ರಗಳ ಸ್ಪರ್ಧೆಯಲ್ಲಿ ಮೂರು ಭಾರತೀಯ ಸಿನಿಮಾಗಳೂ ಇದ್ದವು. ದಿ ಸ್ಟೋರಿ ಟೆಲ್ಲರ್‌, ದಿ ಕಾಶ್ಮೀರಿ ಫೈಲ್ಸ್‌ ಹಾಗೂ ತಮಿಳಿನ ಕುರಂಗು ಪೆಡಲ್‌ ಚಿತ್ರಗಳಿದ್ದವು. ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದ ಪೃಥ್ವಿ ಕೊಣನೂರು ನಿರ್ದೇಶನದ ‘ಹದಿನೇಳೆಂಟು’, ಕೃಷ್ಣೇಗೌಡ ನಿರ್ದೇಶನದ ‘ನಾನು ಕುಸುಮ’ ಹಾಗೂ ದಿನೇಶ್‌ ಶೆಣೈ ನಿರ್ದೇಶಿಸಿದ ಕಥೇತರ ವಿಭಾಗದ ‘ಮಧ್ಯಂತರ’ ಪ್ರದರ್ಶಿತವಾಗಿತ್ತು. ಹದಿನೇಳೆಂಟು ಭಾರತೀಯ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತವಾಗಿತ್ತು. ನವೆಂಬರ್‌ 20 ರಿಂದ 28 ರವರಗೆ ಈ ಚಿತ್ರೋತ್ಸವವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ, ಎನ್‌ಎಫ್ಡಿಸಿ, ಇಎಸ್‌ಜಿ ಆಯೋಜಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next