ಕೊಪ್ಪಳ: ತುಂಗಭದ್ರಾ ದಡದಲ್ಲಿಯೇ ಇರುವ ಪ್ರಸಿದ್ಧ ಪ್ರವಾಸಿ ತಾಣ ಪಂಪಾವನಕ್ಕೆ ಈ ಬಾರಿ ನೀರಿನ ಅಭಾವ ತಲೆದೋರಿದ್ದರೆ, ಸಮೀಪದ ರುದ್ರಾಪುರ ಬಳಿ ನಿರ್ಮಿಸಿದ ಸಾಲು ಮರದ ತಿಮ್ಮಕ್ಕನ ಉದ್ಯಾನವನಕ್ಕೂ ನೀರಿನ ಅಭಾವ ಉಂಟಾಗಿದೆ.
ಜಿಲ್ಲೆಯಲ್ಲಿ ಸತತ ಬರದಿಂದ ಜನತೆ ಕೆಂಗೆಟ್ಟು ಹೋಗಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಗ್ರಾಮೀಣ ಪ್ರದೇಶದ ಜನತೆ ಕೆರೆ, ಕಟ್ಟೆ, ಬಾವಿಯಿದ್ದ ಕಡೆಗೆ ನೀರು ತರಲು ತೆರಳುತ್ತಿರುವುದು ಒಂದೆಡೆಯಾದರೆ, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೂ ನೀರಿನ ಬಿಸಿ ತಟ್ಟಿದೆ.
ತಾಲೂಕಿನ ಮುನಿರಾಬಾದ್ ಡ್ಯಾಂ ಬಳಿಯೇ ಇರುವ ಪ್ರಸಿದ್ಧ ಪಂಪಾವನದಲ್ಲಿ ಸಸಿಗಳ ರಕ್ಷಣೆಗೆ ನೀರಿನ ಅಭಾವ ಉಂಟಾಗಿದೆ. 5 ಎಕರೆಯಲ್ಲಿ ಸಸಿಗಳು ಒಣಗುತ್ತಿದ್ದು, ವಿದ್ಯುತ್‌ಗೆ ಪೂರೈಕೆ ಮಾಡುವ ನೀರಿನಲ್ಲಿಯೇ ಸಸಿಗಳ ರಕ್ಷಣೆ ಮಾಡಿಕೊಳ್ಳಲಾಗುತ್ತಿದೆ.
ಪ್ರತಿ ವರ್ಷದಂತೆ ಬೇಸಿಗೆಯ ತಾಪ ಕಳೆಯಲು ಪಂಪಾವನಕ್ಕೆ ಜನತೆ ಹೆಚ್ಚಿನ ಮಟ್ಟದಲ್ಲಿ ಆಗಮಿಸುತ್ತಿದ್ದಾರೆ. ಸದ್ಯ ಕುಡಿಯುವ ನೀರಿಗೆ ತೊಂದರೆ ಇಲ್ಲವಾದರೂ ಸಸಿಗಳ ರಕ್ಷಣೆ ಅ ಧಿಕಾರಿಗಳಿಗೆ ಸವಾಲಿನ ಪ್ರಶ್ನೆಯಾಗಿದೆ.
ಇನ್ನು, ತಾಲೂಕಿನ ಬೇವಿನಹಳ್ಳಿ ಸಮೀಪದ ರುದ್ರಾಪುರ ಬಳಿ ಅರಣ್ಯ ಇಲಾಖೆಯು ಕಳೆದ ಆಗಸ್ಟ್‌ನಲ್ಲಿ ಸಾಲು ಮರದ ತಿಮ್ಮಕ್ಕ ಹೆಸರಿನ ಗ್ರೀನ್ ಪಾರ್ಕ್ ಸ್ಥಾಪಿಸಿದೆ. ಇಲ್ಲಿಯೂ ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ.