Advertisement

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

01:08 AM May 08, 2024 | Team Udayavani |

ಪುತ್ತೂರು: ಕಾವ್ಯ, ಸಣ್ಣಕತೆ, ನಾಟಕ, ಸಂಶೋಧನೆ, ವಿಮರ್ಶೆ ಮತ್ತು ಜಾನಪದ ಕ್ಷೇತ್ರ ದಲ್ಲಿ ಕೊಡುಗೆ ನೀಡಿದ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅವರು ಮೇ 7ರಂದು ನಿಧನಹೊಂದಿದ್ದಾರೆ.

Advertisement

ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆಲತ್ತಾಜೆಯಲ್ಲಿ ಹುಟ್ಟಿ ಹೆಚ್ಚಿನ ಕಾಲವನ್ನು ಪಾಲ್ತಾಡಿಯಲ್ಲಿ ಕಳೆದು ನಿವೃತ್ತಿಯ ಬಳಿಕ ಪುತ್ತೂರಿನ ಬೆದ್ರಾಳದಲ್ಲಿ ನೆಲೆಸಿದ್ದರು.

ಬೆಟ್ಟಂಪಾಡಿ, ಪಾಣಾಜೆ ಹಿ.ಪ್ರಾ. ಶಾಲೆ, ಬೆಳ್ಳಾರೆ ಬೋರ್ಡ್‌ ಹೈಸ್ಕೂಲ್ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದರು. ಅನಂತರ ಉಜಿರೆಯ ಸರಕಾರಿ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಎಚ್‌ ಡಿಪ್ಲೊಮಾ ಮಾಡಿದರು.

1963ರಲ್ಲಿ ಕುಂತೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಸೇವೆಗೆ ಸೇರಿದರು. ಕೆಯ್ಯೂರು, ಕಾವು ಮಾಟ್ನೂರು, ಸಾಮೆತ್ತಡ್ಕ ಮೊದಲಾದ ಕಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಈ ಮಧ್ಯೆ ಪದವಿ ಶಿಕ್ಷಣ ಪಡೆದು ಬಿ.ಎಡ್‌ ಪದವಿ ಪಡೆದರು.

ಅನಂತರ ಧಾರವಾಡ ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಸ್ನಾತಕೋತ್ತರ ಪದವಿ ಪಡೆದರು. ಹಿಂದಿಯಲ್ಲಿ ರಾಷ್ಟ್ರ ಭಾಷಾವಿಶಾರದಾ ಪದವಿಯನ್ನು ಪೂರ್ಣಗೊಳಿಸಿದ್ದರು. ಅನಂತರ ಉಪ್ಪಿನಂ ಗಡಿ, ಬೊಕ್ಕಪಟ್ಟಣ, ಬೆಟ್ಟಂಪಾಡಿ ಮತ್ತು ಕಾಣಿಯೂರಿನ ಪದವಿ ಪೂರ್ವಕಾಲೇಜು ಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ನಿವೃತ್ತಿ ಆದ ಬಳಿಕ ಸವಣೂರಿನ ವಿದ್ಯಾರಶ್ಮಿ ಶಿಕ್ಷಕ ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಗೌರವ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

Advertisement

ಮಕ್ಕಳ ಕವನ ಸಂಕಲನ, ಕಥಾ ಸಂಕಲನ, ಸಂವಹನ ಮಾಧ್ಯಮವಾಗಿ ಜಾನಪದ, ಜಾನಪದ ಪರಿಸರ, ಜಾನಪದ ವೈದ್ಯ, ಜಾನಪದ ಕುಣಿತ, ದೈವಾರಾಧನೆ, ತುಳುನಾಡಿನ ಸಮಗ್ರ ಪ್ರದರ್ಶನ ಕಲೆ ಮತ್ತು ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ ಪಾಲ್ತಾಡಿ ತುಳು ಭಾಷೆಯ ಬೆಳವಣಿಗೆಗೆ ವಿಶೇಷ ಮುತುವರ್ಜಿ ತೋರಿದ್ದರು. ತುಳು ಅಕಾಡೆಮಿ ಅಧ್ಯಕ್ಷರಾಗಿ ತುಳು ಭಾಷೆಯ ಬೆಳವಣಿಗೆ ಕೊಡುಗೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ಆಯೋಜನೆಯಲ್ಲಿಯು ಪ್ರಮುಖ ಪಾತ್ರ ವಹಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ತುಳುವನ್ನು ತೃತೀಯ ಭಾಷೆಯನ್ನಾಗಿ ಬಳಸುವಲ್ಲಿ ಕಾರಣಕರ್ತರಾಗಿದ್ದರು.

ತುಳು ಜಾನಪದ ಕೂಡುಕಟ್ಟು ಅಧ್ಯಕ್ಷರಾಗಿ, ತುಳು ಅಕಾಡಮಿ ರಿಜಿಸ್ಟ್ರಾರ್‌ ಆಗಿ, ಬಾಲವನ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಆಟಿ ಉತ್ಸವ, ಕೆಡ್ಡಸ ಕೂಟವನ್ನು ಸಾರ್ವಜನಿಕವಾಗಿ ಪರಿಚಯಿಸಿದ ಹಿರಿಮೆ ಇವರದ್ದು. ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ತುಳು ಡಿಪ್ಲೊಮಾ ಕೋರ್ಸ್‌ಗಳಿಗೆ ಪಠ್ಯ ರಚನೆಕಾರರಾಗಿ, ತುಳು ಭಾಷೆಯನ್ನು ಎಂಟನೇ ಪರಿಚ್ಛೇದ ಸೇರಿಸಬೇಕು ಎಂಬ ಆಗ್ರಹದಲ್ಲಿ ಮುಂಚೂಣಿಯಲ್ಲಿ ನಿಂತು ಶ್ರಮಿಸಿದವರು. ಅವರಿಗೆ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ,ತುಳು ಅಕಾಡೆಮಿ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹತ್ತಾರು ಗೌರವಗಳು ಸಂದಿವೆ.

ತುಳು ಸಂಸ್ಕೃತಿ ಮೇಲೆ ಅಪಾರ ಪ್ರೀತಿ
1979ರಲ್ಲಿ “ಬಾಂಗ್ಲಾ ವಿಜಯ’ ಎಂಬ ಯಕ್ಷಗಾನ ಪ್ರಸಂಗ ಕೃತಿ ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರದ ಸೇವೆಯಲ್ಲಿ ತೊಡಗಿದ್ದರು. ವಿವಿಧ ಪತ್ರಿಕೆ-ನಿಯತ ಕಾಲಿಕೆಗಳಲ್ಲಿ ಕತೆ ಕವಿತೆಗಳು ಪ್ರಕಟವಾಗಿವೆ. ಕನ್ನಡ ಸಂಘ, ತುಳು ಸಂಘ, ಯಕ್ಷಗಾನ ಸಂಘ, ಸಮುದಾಯ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗಾಗಿ ಶ್ರಮಿಸಿ ದರು. ಪಾಲ್ತಾಡಿಯವರು ತುಳುನಾಡಿನ ಸಂಸ್ಕೃತಿ ಮತ್ತು ಕಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ನಲಿಕೆ ಜನಾಂಗದ ಕುಣಿತಗಳು ಎಂಬ ವಿಷಯದಲ್ಲಿ ಪಿಎಚ್‌.ಡಿ. ಪದವಿ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next