ಆಳಂದ: ಪಾಲಕರು ತಮ್ಮ ಬಿಡುವಿನ ಸಮಯವನ್ನು ಟಿವಿ ಮುಂದೆ ಕಳೆಯದೆ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟು ಬಾವಿ ಭವಿಷ್ಯದ ಭದ್ರಬುನಾದಿ ಹಾಕಬೇಕು ಎಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು. ಕುಡುಕಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಚ್‌ಕೆಆರ್‌ಡಿಬಿಯಿಂದ ಮಂಜೂರಾದ ಸುಮಾರು 50 ಲಕ್ಷ ರೂ. ವೆಚ್ಚದ ಐದು ಕೋಣೆಗಳ ನಿರ್ಮಾಣ ಮತ್ತು 13.80 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳು ಶಿಕ್ಷಣದಲ್ಲಿ ಹಿಂದುಳಿಯಲು ಶಿಕ್ಷಕರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುವುದು ತಪ್ಪು. ಇದರಲ್ಲಿ ಪಾಲಕರ ಜವಾಬ್ದಾರಿಯೂ ಇರುತ್ತದೆ. ಸರ್ಕಾರ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಮಟ್ಟ ಧಾರಣೆಗೆ ಬಿಸಿಯೂಟ, ಸೈಕಲ್, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಇದರ ಲಾಭವನ್ನು ಬಡ ವಿದ್ಯಾರ್ಥಿಗಳು ಪಡೆಯಬೇಕೆಂದು ಹೇಳಿದರು.
ಅರ್ಧ ಕಿಮೀಗೊಂದು ಬ್ಯಾರೇಜ್: ಮಳೆಗಾಲದಲ್ಲಿ ಸಾಕಷ್ಟು ನೀರು ಎಲ್ಲಿಯೂ ನಿಲ್ಲದೆ ವ್ಯರ್ಥವಾಗಿ ಹರಿದು ಭೀಮಾ ನದಿಯನ್ನು ಸೇರುತ್ತಿದೆ. ಇದರಿಂದ ಕೆಳಭಾಗದ ಭೂಸನೂರ, ಜವಳಿ, ಧಂಗಾಪೂರ, ಹಿತ್ತಲಶಿರೂರ, ಕುಡುಕಿ ಗ್ರಾಮಗಳ ಜನರಿಗೆ ನೀರಿನ ಸಮಸ್ಯೆಯಾಗುತ್ತಿದೆ. ಇದನ್ನು ಹೊಗಲಾಡಿಸಲು ಅರ್ಧ ಕಿಲೋ ಮೀಟರ್ ಗೊಂದು ಬ್ಯಾರೇಜ್ ನಿರ್ಮಿಸಿ ನೀರಿನ ಭವಣೆ ನಿವಾರಿಸಲಾಗುವುದು ಎಂದು ಹೇಳಿದರು.
ಚುನಾಯಿತ ಜನಪ್ರತಿನಿಧಿಗಳ ಎದುರು ಸಾರ್ವಜನಿಕರು ಕೈಜೋಡಿಸಿ ಕೆಲಸ ಕೇಳುವುದು ನೋವಿನ ಸಂಗತಿ. ಗೆಲ್ಲಿಸಿದ ಜನಪ್ರತಿನಿಧಿಗಳ ಕೈ ಹಿಡಿದು ಕೆಲಸ ಕೇಳಿ ಮಾಡಿಕೊಳ್ಳಬೇಕು. ಇದು ಜನರು ಹಕ್ಕು ಎಂದು ಹೇಳಿದರು. ಜಿಡಗಾ ಜಿ.ಪಂ. ಸದಸ್ಯ ಸಿದ್ದರಾಮ ಪ್ಯಾಟಿ ಮಾತನಾಡಿ, ಶಾಸಕ ಬಿ.ಆರ್. ಪಾಟೀಲ ಅವರು ಈ ಹಿಂದೆ ಹತ್ತು ವರ್ಷದಲ್ಲಿ ತಾಲೂಕಿನಲ್ಲಿ ಆಗದೆ ಇರುವ ಪ್ರಗತಿಯನ್ನು ಮಾಡುತ್ತಿದ್ದಾರೆ.
ಪ್ರತಿ ಹಳ್ಳಿಗೂ ಅನುದಾನ ನೀಡಿ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗರಣ್ಣ ಗುಂಡಗುರ್ತಿ, ಡಾ| ಹಣಮಂತ್ರಾಯ ಕುಡುಕಿ ಮಾತನಾಡಿದರು. ದತ್ತಾತ್ರೇಯ ಕುಡುಕಿ ಪ್ರಸ್ತಾವಿಕವಾಗಿ ಮಾತನಾಡಿದರು. ಚೌಡಪ್ಪ ಪೊಲೀಸ್‌ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ತುಳಸಾಬಾಯಿ, ಜಿಪಂ ಎಇ ತಾನಾಜಿ, ಜೆಇ ಬಸವರಾಜ ಭಜಂತ್ರಿ, ಪ್ರಮುಖರಾದ ಶಿವಣ್ಣ ಬುರುಣಾಪುರ,
ಪುಂಡಲೀಕ ಹೊಳಕುಂದಿ, ಅಮೋಘಸಿದ್ದ ಬುರಣಾಪುರ, ವಿಠಲ ನೀಲೂರ, ಸಿದ್ದರಾಮ ಮೇಲನಕೇರಿ, ವಿಠಲ ಸಿ. ಪಾಟೀಲ, ಶಿವಾಯ ಸ್ವಾಮಿ, ನರಸಿಂಗರಾವ ಮಾಲಿಪಾಟೀಲ, ಭೀಮಶಾ ವಾಗªರಿ, ಮಲ್ಲಣ್ಣ ಕುಂಬಾರ, ಸೂರ್ಯಕಾಂತ ನಿಂಬರ್ಗಾ, ರಾಮಚಂದ್ರ ಶಿವಗೊಂಡ, ರತ್ನಾಬಾಯಿ ಸೋನಾರ, ಅಂಗನವಾಡಿ ಮೇಲ್ವಿಚಾರಕಿಯರಾದ ಸುರೇಖಾ ಪೂಜಾರಿ, ಮಹಾದೇವಿ, ಸುನೀತಾ ಭಾಗವಹಿಸಿದರು. ಸುನೀಲ ದೊಡ್ಡಮನಿ ನಿರೂಪಿಸಿ, ವಂದಿಸಿದರು.