Advertisement

Udupi: ಎಂಜಿಎಂ ಸಂಧ್ಯಾ ಕಾಲೇಜು-ಸೆ.2ರಂದು ಸ್ಥಾಪನ ದಿನಾಚರಣೆ

10:33 AM Sep 02, 2024 | Team Udayavani |

ಉಡುಪಿ: ಉಡುಪಿಯ ಪ್ರತಿಷ್ಠಿತ ಸಂಸ್ಥೆ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜು ಇದರ ಅಂಗಸಂಸ್ಥೆಯಾದ ಮಹಾತ್ಮಾ ಗಾಂಧಿ
ಸಂಧ್ಯಾ ಕಾಲೇಜು ಸೆ.2ರಂದು ತನ್ನ ದ್ವಿತೀಯ ಸ್ಥಾಪಕ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದೆ.

Advertisement

ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿ ಪ್ರಾರಂಭವಾದ ಈ ಹೊಸ ಕಾಲೇಜು ಇಂದು ಎರಡು
ವರ್ಷಗಳನ್ನು ಪೂರೈಸುತ್ತಿದೆ. ಈ ಹೊಸ ಕಾಲೇಜು ತನ್ನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಂದ ಕರಾವಳಿ ಹಾಗೂ
ಮಲೆನಾಡು ಭಾಗದ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಸಫ‌ಲವಾಗಿದೆ. ಇಲ್ಲಿ ಶೈಕ್ಷಣಿಕ ಚಟುವಟಿಕೆಗಳ ಜತೆಗೆ ವಿದ್ಯಾರ್ಥಿಗಳು
ತಮ್ಮ ಭವಿಷ್ಯವನ್ನು ಹೆಚ್ಚು ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯವಾದ ಕೌಶಲಗಳ ತರಬೇತಿ ನೀಡಲಾಗುತ್ತಿದೆ.

2022-23ನೇ ಸಾಲಿನಲ್ಲಿ ಕೇವಲ ಬಿಕಾಂ ಹಾಗೂ ಬಿಸಿಎ ಕೋರ್ಸುಗಳೊಂದಿಗೆ ಪ್ರಾರಂಭವಾದ ಈ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿಬಿಎ ಕೋರ್ಸನ್ನು ಸಹ ಪ್ರಾರಂಭಿಸಲಾಗಿದೆ. ಆರಂಭದಲ್ಲಿ 109 ವಿದ್ಯಾರ್ಥಿಗಳಿಂದ ಪ್ರವೇಶಾತಿ ಪಡೆದುಕೊಂಡ ಈ ಕಾಲೇಜಿನಲ್ಲಿ ಈಗ 390ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳು ನಾಡಿನ ವಿವಿಧ ಜಿಲ್ಲೆಗಳಿಂದ ಬಂದವರಾಗಿದ್ದು, ಅವರಲ್ಲಿ 68 ವಿದ್ಯಾರ್ಥಿನಿಯರು ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೇಲಿನಲ್ಲಿ ವಾಸವಾಗಿದ್ದಾರೆ.

ಎಂಜಿಎಂ ಕಾಲೇಜು ವಿಶ್ವಸ್ತ ಮಂಡಳಿಯ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಅವರ ಕನಸಿನ ಕೂಸಾಗಿ ಮೂಡಿಬಂದ ಈ ಕಾಲೇಜು ಇಂದು ಈ ಭಾಗದ ಒಂದು ಪ್ರತಿಷ್ಠಿತ ಕಾಲೇಜಾಗಿ ರೂಪುಗೊಳ್ಳುತ್ತಿದೆ. ವಿದ್ಯಾರ್ಥಿಗಳ ಭವಿಷ್ಯಗಳ ಬಗ್ಗೆ ವಿಶೇಷವಾದ ಕಾಳಜಿ ಹೊಂದಿರುವ ಸಂಸ್ಥೆಯ ಅಧ್ಯಕ್ಷರು ಅವರಿಗಾಗಿ ವಿವಿಧ ಕೌಶಲ ತರಬೇತಿಗಳನ್ನು ನೀಡಲು ವ್ಯವಸ್ಥೆ ಮಾಡಿದ್ದಾರೆ. ಈಗಾಗಲೇ ಡಿಜಿಟಲ್‌ ಶಿಕ್ಷಣ, ಫೋಟೋಗ್ರಫಿ, ವೀಡಿಯೋಗ್ರಫಿ, ಕೇಕ್‌ ತಯಾರಿ, ಯಕ್ಷಗಾನ ತರಬೇತಿ, ವ್ಯಕ್ತಿತ್ವ ವಿಕಸನ ಹಾಗೂ ಮೃದು ಕೌಶಲ ಇತ್ಯಾದಿಗಳ ಕುರಿತು ಅಗತ್ಯ ತರಬೇತಿಗಳನ್ನು ನೀಡಲಾಗಿದೆ.

Advertisement

ಈ ಶೈಕ್ಷಣಿಕ ವರ್ಷದಲ್ಲಿ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಗ್ರಾಫಿಕ್‌ ಡಿಸೈನಿಂಗ್‌, ಡಿಜಿಟಲ್‌ ಮಾರ್ಕೇಟಿಂಗ್‌, ಡೇಟಾ
ಆನಾಲಿಟಿಕ್ಸ್‌, ಸೈಬರ್‌ ಸೆಕ್ಯುರಿಟಿ, ಆಹಾರ ಸಂಸ್ಕರಣೆ, ಟೈಲರಿಂಗ್‌, ಓದುವ ಹಾಗೂ ಬರೆಯುವ ಕೌಶಲ ಮತ್ತು ಸಾಮಾನ್ಯ ಕಸೂತಿ, ರಂಗ ನಟನೆ, ಸುಗಮ ಸಂಗೀತ, ಕರಾಟೆ, ಆಂತರಿಕ ವಿನ್ಯಾಸ, ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಲು ತಯಾರಿ ನಡೆಸಲಾಗಿದೆ. ಈ ಕಾಲೇಜಿನಲ್ಲಿ ಪದವಿ ಶಿಕ್ಷಣದೊಂದಿಗೆ ಅವುಗಳಿಗೆ ಪೂರಕವಾಗಿ ಅಗತ್ಯ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಕಾಲೇಜು ಆಡಳಿತ ವರ್ಗ ಸಂಕಲ್ಪ ಮಾಡಿದೆ. ಇವುಗಳ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು
ಪಡೆದುಕೊಳ್ಳುವಂತೆ ಈಗಾಗಲೇ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ.

ಸ್ಥಾಪಕ ದಿನಾಚರಣೆ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಪರ ಜಿಲ್ಲಾಧಿಕಾರಿ ಮಮತಾ ದೇವಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಎಂ.ಜಿ.ಎಂ. ಪ.ಪೂ.ಕಾಲೇಜಿನ ಪ್ರಾಂಶುಪಾಲೆ
ಮಾಲತಿದೇವಿ, ಟಿ. ಮೋಹನದಾಸ ಪೈ ಕೌಶಲ ಕೇಂದ್ರದ ನಿರ್ದೇಶಕ ಟಿ. ರಂಗ ಪೈ ಉಪಸ್ಥಿತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಮುಖವಾಣಿ, “ದ ಹೊರಿಝೋನ್‌’ (ದ್ವಿತೀಯ ಸಂಚಿಕೆ) ಅನಾವರಣಗೊಳ್ಳಲಿದೆ. 77 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಮಾರು 5.5 ಲ.ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲು ಸಂಸ್ಥೆಯ ಅಧ್ಯಕ್ಷರು ವ್ಯವಸ್ಥೆ ಮಾಡಿದ್ದಾರೆ ಎಂದು ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ ಎಸ್‌.ನಾಯ್ಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next