Advertisement

Teachers Day: ನಾನು ಬರಿಗಾಲ ವಿದ್ಯಾರ್ಥಿಯಾಗಿದ್ದ ಕಾರಣ ಮಕ್ಕಳಿಗೆ ಶೂ ಭಾಗ್ಯ ನೀಡಿದೆ: ಸಿಎಂ

01:23 AM Sep 06, 2024 | Team Udayavani |

ಬೆಂಗಳೂರು: ಒಂದರಿಂದ ನಾಲ್ಕನೇ ತರಗತಿ ವರೆಗೆ ಓದದ ನನ್ನನ್ನು ರಾಜಪ್ಪ ಮೇಸ್ಟ್ರೆ ನೇರವಾಗಿ 5ನೇ ತರಗತಿಗೆ ದಾಖಲಿಸಿಕೊಂಡರು. ಅವರನ್ನು ನನ್ನ ಜೀವಮಾನವಿಡೀ ಸ್ಮರಿಸುತ್ತೇನೆ. ಶಿಕ್ಷಕರ ಸೇವೆ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಹೈಸ್ಕೂಲ್‌ಗೆ ಹೋಗುವಾಗ ಚಪ್ಪಲಿಗೂ ಕಷ್ಟವಿತ್ತು. ಅದಕ್ಕಾಗಿಯೇ ಶೂ ಭಾಗ್ಯವನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಗುರುವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಓದಿರುವ ವಿದ್ಯಾರ್ಥಿಗಳೂ ಮೌಡ್ಯಕ್ಕೆ ಜೋತು ಬೀಳುವುದು, ಜಾತಿ ತಾರತಮ್ಯ ಮಾಡುವುದಾದರೆ ಅವರಿಗೆ ಸಿಕ್ಕ ಶಿಕ್ಷಣಕ್ಕೆ ಅರ್ಥ ಇರುವುದಿಲ್ಲ. ರೈತರು, ಶಿಕ್ಷಕರು, ಸೈನಿಕರು ದೇಶದ ನಿರ್ಮಾತೃಗಳು. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವ ಮೂಲಕ ದೇಶದ ವ್ಯಕ್ತಿತ್ವವನ್ನು ರೂಪಿಸುವವರು ನಮ್ಮ ಶಿಕ್ಷಕರು. ಇದು ಶಿಕ್ಷಕರ ಮೂಲಭೂತ ಜವಾಬ್ದಾರಿ. ವಿದ್ಯಾರ್ಥಿಗಳನ್ನು ಸ್ವತಂತ್ರವಾಗಿ ಯೋಚಿಸುವಂತೆ ರೂಪಿಸಬೇಕು. ಆಗ ಮಾತ್ರ ಅವರಿಗೆ ಸಮಾಜ ಅರ್ಥ ಆಗುತ್ತದೆ. ಸಮಾಜದ ಸಮಸ್ಯೆಗಳಿಗೆ ಪರಿಹಾರ ರೂಪಿಸುತ್ತಾರೆ. ಇನ್ನು 800 ವರ್ಷಗಳ ಹಿಂದೆಯೇ ಬಸವಾದಿ ಶರಣರು ತಿರಸ್ಕರಿಸಿದ ಹಣೆಬರಹ ಮುಂತಾದ ಕರ್ಮ ಸಿದ್ಧಾಂತವನ್ನು ಶಿಕ್ಷಕರೇ ನಂಬುತ್ತಾರೆ. ಇದು ಸರಿಯಲ್ಲ ಎಂದರು.

ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಕ್ರಮ
ಶಿಕ್ಷಕರ ಸಮಸ್ಯೆಗಳನ್ನು ಶಿಕ್ಷಕರ ಸಂಘದ ಜತೆ ಸೇರಿ ಸುದೀರ್ಘ‌ವಾಗಿ ಚರ್ಚಿಸಿದ್ದೇನೆ. ಪದವಿಪೂರ್ವ ಶಿಕ್ಷಕರ ಸಮಸ್ಯೆಗಳು ಅರ್ಥವಾಗಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾರಾಯಣಸ್ವಾಮಿ, ಮೈಸೂರಿನ ಗಿರೀಶ್‌, ಬೆಂಗಳೂರು ನಗರದ ಅಶೋಕ್‌ ಸೇನ್‌ ಗುಪ್ತ, ನರಸಿಂಹಮೂರ್ತಿ ಅವರನ್ನು ಅಭಿನಂದಿಸಿದರು. 20 ಪ್ರಾಥಮಿಕ ಶಾಲಾ ಶಿಕ್ಷಕರು, 10 ಪ್ರೌಢ ಶಾಲಾ ಶಿಕ್ಷಕರು ಮತ್ತು ಓರ್ವ ವಿಶೇಷ ಶಿಕ್ಷಕರು ಹಾಗೂ 10 ಮಂದಿ ಪದವಿಪೂರ್ವ ಉಪನ್ಯಾಕರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next