Advertisement

Higher Education: ಸರಕಾರಿ ವೃತ್ತಿಪರ ಕಾಲೇಜುಗಳಿಗೆ ಸೌಕರ್ಯ, ಬ್ರ್ಯಾಂಡಿಂಗ್‌ ಕೊರತೆ

12:55 AM Aug 26, 2024 | Team Udayavani |

ಬೆಂಗಳೂರು: ರಾಜ್ಯದ ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳು ಬೋಧಕರ ಕೊರತೆ, ಮೂಲ ಸೌಕರ್ಯದ ಅಲಭ್ಯತೆ, ಬ್ರ್ಯಾಂಡಿಂಗ್‌ನ ಪರಿಕಲ್ಪನೆ ಇಲ್ಲದಿರುವಿಕೆ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಾದ ಯೋಜನೆಗಳ ಕೊರತೆಯಿಂದ ಬಳಲುತ್ತಿದೆ ಎಂದು ಉನ್ನತ ಶಿಕ್ಷಣ ಪರಿಷತ್‌ನ ವರದಿಯೊಂದು ಹೇಳಿದೆ. ಹಾಗೆಯೇ ರಾಜ್ಯದ ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳನ್ನು ಉತ್ಕೃಷ್ಟತಾ ಕೇಂದ್ರಗಳನ್ನಾಗಿ ರೂಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಿದೆ.

Advertisement

ರಾಜ್ಯದಲ್ಲಿ ನೀಟ್‌ ಮೂಲಕ ಸರಕಾರಿ ಕೋಟಾದಲ್ಲಿ ಮೆಡಿಕಲ್‌ ಸೀಟ್‌ ಪಡೆದು ಸರಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಓದಲು ಆದ್ಯತೆ ನೀಡುತ್ತಾರೆ. ಅದೇ ಎಂಜಿನಿಯರಿಂಗ್‌ನಲ್ಲಿ ಸಿಇಟಿ ಮೂಲಕ ಸರಕಾರಿ ಕೋಟಾದಲ್ಲಿ ಎಂಜಿನಿಯರಿಂಗ್‌ ಸೀಟ್‌ ಪಡೆಯುವ ವಿದ್ಯಾರ್ಥಿಗಳ ಮೊದಲ ಆದ್ಯತೆ ಖಾಸಗಿ ಕಾಲೇಜ್‌ಗಳಾಗಿರುತ್ತವೆ.

ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ| ಎಂ. ಸಿ. ಸುಧಾಕರ್‌ ಅವರ ಸೂಚನೆಯ ಮೇರೆಗೆ ರಚನೆಯಾದ ಉನ್ನತ ಶಿಕ್ಷಣ ಪರಿಷತ್‌ನನ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಕೆ.ಜಿ. ಚಂದ್ರಶೇಖರ್‌ ನೇತೃತ್ವದ ಸಮಿತಿಯು ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ರಾಜ್ಯದ ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಸಾಮರ್ಥ್ಯ ವೃದ್ಧಿ; ಸವಾಲುಗಳು ಮತ್ತು ತಂತ್ರಗಳು’ ಎಂಬ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದೆ.

ಸರಕಾರಿ ಕಾಲೇಜುಗಳ ಕೊರತೆ ಏನು?:
ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರಕಾರಿ ಕಾಲೇಜುಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬಂದಿ ತೀವ್ರ ಕೊರತೆಯಿದೆ. ಎಂಜಿನಿಯರಿಂಗ್‌ ಕಲಿಕೆಗೆ ಅಗತ್ಯವಾದ ಉಪಕರಣಗಳು ಲಭ್ಯವಿಲ್ಲ, ಕಾಲೇಜುಗಳ ಬ್ರ್ಯಾಂಡಿಂಗ್‌ ಕಳಪೆಯಾಗಿದ್ದು ಸಂಸ್ಥೆಗಳು ಕಣ್ಣಿಗೆ ಕಾಣುತ್ತಿಲ್ಲ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರ ವ್ಯವಸ್ಥಿತವಾಗಿಲ್ಲ, ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ನೀತಿ ನಿರ್ಧಾರಗಳು ಕಠಿನವಾಗಿದ್ದು ಅವುಗಳ ಮರು ಪರಿಶೀಲನೆ ನಡೆಯಬೇಕು. ನೇಮಕಾತಿ ಮತ್ತು ವರ್ಗಾವಣೆ ನೀತಿಯಲ್ಲಿ ಬದಲಾವಣೆ ಅಗತ್ಯ ಎಂದು ವರದಿ ಹೇಳಿದೆ.

ಸರಕಾರಿ ಕಾಲೇಜುಗಳಲ್ಲಿ ಬೋಧನಾ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ರಾಜ್ಯ ಸರಕಾರದ ಎಲ್ಲ ಇಲಾಖೆಗಳ ಪಾಲುದಾರಿಕೆ ಮತ್ತು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು, ಸಂಸ್ಥೆಯ ಉನ್ನತ ಅಧಿಕಾರಿಗಳು ಮತ್ತು ಸರಕಾರದ ನೀತಿ ನಿರೂಪಕರ ಮಧ್ಯೆ ನಿರಂತರ ಸಮಾಲೋಚನೆ ನಡೆಯಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

ಶುಲ್ಕ ಹೆಚ್ಚಳಕ್ಕೂ ಶಿಫಾರಸು?
ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳನ್ನು ಉತ್ಕೃಷ್ಟತಾ ಕೇಂದ್ರಗಳನ್ನಾಗಿಸಲು ಕೆಲ ಅಲ್ಪ-ದೀರ್ಘ‌ಕಾಲೀನ ಯೋಜನೆಗಳನ್ನು ಹಾಕಿಕೊಳ್ಳಬೇಕು. ಕಡಿಮೆ ಶುಲ್ಕ ಸಂರಚನೆ ಅನುಕೂಲಕರವಾಗಿದ್ದರೂ ಮುಂದಿನ ದಿನಗಳಲ್ಲಿ ಮುಂದುವರಿಯಬಾರದು ಎಂದು ವರದಿಯಲ್ಲಿ ಹೇಳಲಾಗಿದೆ. ವಿಟಿಯು ಪಠ್ಯದ ಜತೆಗೆ ಹೆಚ್ಚುವರಿ ಕೋರ್ಸ್‌ಗಳನ್ನು ಪರಿಚಯಿಸಬೇಕು, ಉದ್ದಿಮೆಗಳ ತಜ್ಞರನ್ನು ಬಳಸಿ ತಂತ್ರಜ್ಞಾನದಲ್ಲಿ ತರಬೇತಿ, ಹೆಚ್ಚು ಪರೀಕ್ಷಾ ಕೇಂದ್ರ ಮತ್ತು ಇನ್‌ ಕ್ಯುಬೇಟರ್‌ ಸೆಂಟರ್‌ಗಳ ಸ್ಥಾಪನೆ, ವಿದ್ಯಾರ್ಥಿಗಳಿಗೆ ಫಿನಿಶಿಂಗ್‌ ಸ್ಕೂಲ್‌ ಕಾರ್ಯಕ್ರಮ ಜಾರಿಗೊಳಿಸುವುದು ಸೇರಿ ಇ ತರ ಶಿಫಾರಸನ್ನು ವರದಿಯಲ್ಲಿ ನೀಡಲಾಗಿದೆ.

ಈ ವರದಿ ಇನ್ನೂ ನನ್ನ ಕೈಸೇರಿಲ್ಲ. ವರದಿ ಸಿಕ್ಕಿದ ತತ್‌ಕ್ಷಣ ಶಿಫಾರಸು ಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಇದೇ ಮಾದರಿಯಲ್ಲಿ ಪಾಲಿಟೆಕ್ನಿಕ್‌ ಕಾಲೇಜು ಗಳ ಬಗ್ಗೆಯೂ ವರದಿಯ ತಯಾರಿಸಲು ಸೂಚಿಸಿದ್ದು ಎಲ್ಲ ವರದಿಗಳು ಕೈ ಸೇರಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು. -ಡಾ| ಎಂ.ಸಿ. ಸುಧಾಕರ್‌, ಉನ್ನತ ಶಿಕ್ಷಣ ಇಲಾಖೆ ಸಚಿವ

ರಾಕೇಶ್‌ ಎನ್‌. ಎಸ್‌. 

Advertisement

Udayavani is now on Telegram. Click here to join our channel and stay updated with the latest news.

Next