Advertisement

ಥಟ್ಟನೆ ಮಾಡಿ ರುಚಿ ನೋಡಿ ಪಾಲಕ್‌ ಪನ್ನೀರ್‌ ಟೋಸ್ಟ್‌

12:51 AM Nov 05, 2022 | ಶ್ರೀರಾಮ್ ನಾಯಕ್ |

ಉತ್ತಮ ಆರೋಗ್ಯಕ್ಕೆ ಆಹಾರಕ್ರಮದ ಬಗ್ಗೆ ಕಾಳಜಿ ವಹಿಸುವುದು ಈಗಿನ ಪೀಳಿಗೆಗೆ ಅವಶ್ಯಕವಾಗಿದೆ. ಆಹಾರ ಪದಾರ್ಥಗಳಲ್ಲಿ ಪಾಲಕ್‌ ಸೊಪ್ಪನ್ನು ಬಳಕೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಪಾಲಕ್‌ ಸೊಪ್ಪಿನಲ್ಲಿ ವಿಟಮಿನ್‌ ಸಿ,ಕಬ್ಬಿಣಾಂಶವು ಹೆಚ್ಚಿರುವುದರಿಂದ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ ಇದು ದೇಹವನ್ನು ಆರೋಗ್ಯಕರವಾಗಿ ಮಾಡಲು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.ಹಾಗೆಯೇ ಪನ್ನೀರ್‌ ನಲ್ಲಿ ಸಹ ಪ್ರೋಟೀನ್‌,ಕ್ಯಾಲ್ಸಿಯಂ ಮತ್ತು ಫೈಬರ್‌ ಗುಣ ಹೊಂದಿರುವುದರಿಂದ ಆರೋಗ್ಯಕ್ಕೂ ಇದು ಉತ್ತಮ.

Advertisement

ಹೀಗೆ ಪಾಲಕ್‌ ಮತ್ತು ಪನ್ನೀರ್‌ ನಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು. ಮಾತ್ರವಲ್ಲದೆ ಪಾಲಕ್‌/ಪನ್ನೀರ್‌ ಅನ್ನು ಇಷ್ಟಪಡದವರು ಸಾಮಾನ್ಯವಾಗಿ ಯಾರೂ ಇರಲಿಕ್ಕಿಲ್ಲ. ಹಾಗಾದರೆ ನಾವಿಲ್ಲಿ ಪಾಲಕ್‌ ಪನ್ನೀರ್‌ ಟೋಸ್ಟ್‌ ಮಾಡುವ ವಿಧಾನವನ್ನು ನಿಮಗಾಗಿ ಪ್ರಸ್ತುತಪಡಿಸುತ್ತೇವೆ. ನೀವೂ ಸಹ ಈ ರೆಸಿಪಿಯನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ಸ್ವಾಧಿಷ್ಟವಾಗಿ ಸವಿಯಿರಿ.

ಪಾಲಕ್‌ ಪನ್ನೀರ್‌ ಟೋಸ್ಟ್‌

ಬೇಕಾಗುವ ಸಾಮಗ್ರಿಗಳು
ಪಾಲಕ್‌ ಸೊಪ್ಪು-3ಕಟ್ಟು, ಪನ್ನೀರ್‌-100ಗ್ರಾಂ, ಗಸ-ಗಸೆ-1ಚಮಚ, ಬ್ರೆಡ್‌-10 ಪೀಸ್‌, ಶುಂಠಿ-ಸ್ವಲ್ಪ, ಬೆಳ್ಳುಳ್ಳಿ-6 ಎಸಳು , ತೆಂಗಿನ ತುರಿ-1ಕಪ್‌, ಹಸಿಮೆಣಸು-8ರಿಂದ10, ಎಣ್ಣೆ,ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಪಾಲಕ್‌ ಸೊಪ್ಪನ್ನು ತೊಳೆದು ಚಿಕ್ಕದಾಗಿ ಹೆಚ್ಚಿರಿ. ನಂತರ ಅದನ್ನು ನುಣ್ಣಗೆ ಬೇಯಿಸಿರಿ. ಆ ಮೇಲೆ ಶುಂಠಿ, ಹಸಿಮೆಣಸು, ಗಸಗಸೆ, ಬೆಳ್ಳುಳ್ಳಿಯನ್ನು ಮಿಕ್ಸ್‌ ಜಾರಿಗೆ ಹಾಕಿ ಗ್ರೈಂಡ್ ಮಾಡಿ. ನಂತರ ಬೇಯಿಸಿದ ಪಾಲಕ್‌ ಸೊಪ್ಪಿಗೆ ಗ್ರೈಂಡ್ ಮಾಡಿದ ಮಸಾಲವನ್ನು ಸೇರಿಸಿರಿ. ಸಣ್ಣ ಉರಿಯಲ್ಲಿ ಕುದಿಸಿರಿ. ಕುದಿಯುವಾಗ ಪನ್ನೀರ್‌ ನ್ನು ಸಣ್ಣ-ಸಣ್ಣ ತುಂಡುಗಳಾಗಿ ಮಾಡಿ ಹಾಕಿರಿ. ತದನಂತರ ತೆಂಗಿನ ತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಈ ಮಿಶ್ರಣವನ್ನು ಎರಡು ಬ್ರೆಡ್‌ ನಡುವೆ ಇಟ್ಟು ಟೋಸ್ಟರ್‌ ನಲ್ಲಿಟ್ಟು ಟೋಸ್ಟ್‌ ಮಾಡಿ. ಟೋಸ್ಟರ್‌ ಇಲ್ಲದಿದ್ದರೆ ತವಾ ಮೇಲೆ ಹಾಕಿ ಟೋಸ್ಟ್‌ ಮಾಡಬಹುದು. ರುಚಿಕರವಾದ ಪಾಲಕ್‌ ಪನ್ನೀರ್‌ ಟೋಸ್ಟ್‌ ಸವಿಯಲು ಸಿದ್ಧ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next