Advertisement

ಓದುಗನ ಚಿತ್ತಾಕರ್ಷಿಸುವ “ಪಕ್ಕಿಹಳ್ಳದ ಹಾದಿಗುಂಟ”

01:12 PM Aug 28, 2021 | Team Udayavani |

ಕನ್ನಡದ ಗಮನಾರ್ಹ ಲೇಖಕಿ ಅನುಪಮಾ ಪ್ರಸಾದ್ ಅವರ ‘ಪಕ್ಕಿಹಳ್ಳದ ಹಾದಿಗುಂಟ’ ಓದುಗರನ್ನು ಆಕರ್ಷಿಸುವುದು ತನ್ನ ಗ್ರಾಮೀಣ ಸೊಗಡಿನ ಶೀರ್ಷಿಕೆ, ಕಥಾವಸ್ತು ಮತ್ತು  ಪ್ರಾದೇಶಿಕ ಆಡುಭಾಷೆಯನ್ನು ಬಳಸಿದ  ಕಥನ ಶೈಲಿಗಳಿಂದ.

Advertisement

ಈ ರೀತಿ ಹಳ್ಳಿ-ಹಳ್ಳಿಗಳ ನಡುವಿನ ಸಂಚಾರ, ಗುಡ್ಡ-ಬಯಲು-ಬೆಟ್ಟ-ಕಾಡುಗಳ ವರ್ಣನೆ,  ಕೃಷಿ-ಬೇಸಾಯ-ಉಪಕಸುಬುಗಳ ಕುರಿತಾದ ವಿವರಣೆಗಳ ಜೊತೆಗೆ ಸಂಯಗಿತ, ಯಕ್ಷಗಾನ ತಾಳಮದ್ದಳೆ, ಪುರಾಣ ಗ್ರಂಥಗಳ ಪಾರಾಯಣ ಮೊದಲಾದ ಕಲೆಗಳಲ್ಲಿ ಗ್ರಾಮೀಣರು ಬೆಳೆಸಿಕೊಳ್ಳುವ ಆಸಕ್ತಿ, ಅವರ ಸಾಂಪ್ರದಾಯಿಕ ಶೈಲಿಯ ಆಹಾರ ಪದ್ಧತಿ -ಇತ್ಯಾದಿಗಳು ಇಷ್ಟು ಸಮೃದ್ಧವಾಗಿ ತುಂಬಿಕೊಂಡಿರುವ ಕಾದಂಬರಿ ಓರ್ವ ಮಹಿಳೆಯಿಂದ ಬಂದಿರುವುದು ಇದೇ ಮೊದಲ ಬಾರಿ ಅನ್ನಿಸುತ್ತದೆ(ಸ್ವಲ್ಪ ಮಟ್ಟಿಗೆ ಹೆಚ್.ನಾಗವೇಣಿಯವರ ‘ಗಾಂಧಿ ಬಂದ’ವನ್ನು ಬಿಟ್ಟರೆ). ಓದಿ ಕೆಳಗಿಟ್ಟ ನಂತರ ಮನಸ್ಸನ್ನು ಮತ್ತೆ ಮತ್ತೆ ಕಾಡುವ ಗುಣ ಈ ಕಾದಂಬರಿಗಿದೆ.

ಇದು ಮುಖ್ಯವಾಗಿ ರಾಮಶರ್ಮ ಮತ್ತು ಅಣ್ಣಯ್ಯ ಬಲ್ಲಾಳ ಎಂಬವರ ಎರಡು ಕುಟುಂಬಗಳ ಮೂರು ತಲೆಮಾರುಗಳ ಕಥೆ ಎಂದು ಹೇಳಬಹುದಾದರೂ ಇಲ್ಲಿ ಕುಟುಂಬಗಳ ಕಥೆಗಿಂತಲೂ ಇಲ್ಲಿ  ವಿಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನಗಳು ತಂದಿಟ್ಟ ಪರಿಸರ ಮಾಲಿನ್ಯದ ಸಮಸ್ಯೆಗಳು ಮನುಷ್ಯನ ಬದುಕನ್ನು ವಿನಾಶದತ್ತ ಕೊಂಡೊಯ್ಯುತ್ತಿರುವುದನ್ನು ಮಾತ್ರವಲ್ಲದೆ  ಒಂದು ನಿರ್ದಿಷ್ಟ ದೇಶ – ಕಾಲಗಳಲ್ಲಿ ಜನರ ಬದುಕಿನಲ್ಲಾದ ಪಲ್ಲಟಗಳನ್ನು ಚಿತ್ರಿಸುವುದೇ ಲೇಖಕಿಯ ಮುಖ್ಯ ಕಾಳಜಿಯಾಗಿದೆ. ಇಂಥ ಕರುಣಾಜನಕ ಸ್ಥಿತಿ, ಕೌಟುಂಬಿಕ ಬದುಕು ಮತ್ತು ಸಾಮಾಜಿಕ ಸಂಬಂಧಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಅನ್ನುವುದನ್ನು ಹೇಳುವುದೂ ಲೇಖಕಿಗೆ ಮುಖ್ಯವಾಗುತ್ತದೆ.

ಇದನ್ನೂ ಓದಿ :  ಮೈಸೂರು ಪ್ರಕರಣ: ಬಾಲಾಪರಾಧಿ ಸೇರಿ ಐವರು ಅರೆಸ್ಟ್; ತರಕಾರಿ ಮಂಡಿಗೆ ಬಂದವರು ಅಪರಾಧ ಮಾಡಿದರು

ದೇವನಗರಿ ಎಂಬ ಹಳ್ಳಿಯಲ್ಲಿ ರಾಮಶರ್ಮರ ಕುಟುಂಬದ ಎರಡನೆಯ ತಲೆಮಾರಿನ ಶಂಭು ಶರ್ಮ ಮತ್ತು ಅಣ್ಣಯ್ಯ ಬಲ್ಲಾಳರ ಕುಟುಂಬದ ಎರಡನೆಯ ತಲೆಮಾರಿನ ದೂಮಣ್ಣ ಬಲ್ಲಾಳರ ತನಕ ನಿಸರ್ಗದೊಂದಿಗಿನ ನಂಟು ಬಲವಾಗಿದ್ದು ಅವರು ಗದ್ದೆ-ತೋಟ-ಕೃಷಿ-ಬೇಸಾಯಗಳೊಂದಿಗೆ ಸಂತೋಷದ ಜೀವನ‌ ಸಾಗಿಸುತ್ತಾರೆ. ಮೂರನೆಯ ತಲೆಮಾರಿನ ಶಿವರಾಮ ಮತ್ತು ಶೇಖರ ಬಲ್ಲಾಳರ ನಂತರ ಅವರು ಹೊರಜಗತ್ತಿನ ವ್ಯವಹಾರಗಳೊಂದಿಗೆ  ಸೇರಿಕೊಳ್ಳುತ್ತಾರೆ. ಅದರಲ್ಲೂ ವಿಜ್ಞಾನ ಕಲಿತು ಕಾರ್ಪೊರೇಟ್ ಜಗತ್ತನ್ನು ಸೇರುವ ಶಿವರಾಮ ಅಧಿಕಾರದ ಅಹಂಕಾರದಲ್ಲಿ ಹಳ್ಳಿಯೊಂದಿಗಿನ ಹೊಕ್ಕುಳ ಬಳ್ಳಿಯ ಸಂಬಂಧವನ್ನೇ ಕಡಿದುಕೊಳ್ಳುತ್ತಾನೆ.

Advertisement

ಅದೇ ಸಮಯದಲ್ಲಿ ದೇವನಗರಿಯು ಎಂಡೋ ಸಲ್ಫಾನ್ ದುಷ್ಪರಿಣಾಮಕ್ಕೊಳಗಾಗಿ ನರಕವಾಗುತ್ತದೆ. ಹಳ್ಳಿಗರ ಕಷ್ಟಗಳಿಗೆ ಸ್ಪಂದಿಸಿ ಶೇಖರ ಬಲ್ಲಾಳ ಎಲ್ಲರಿಗೂ ತನ್ನಿಂದಾದ ಸಹಾಯ ಮಾಡುತ್ತಾನೆ. ಸರಕಾರಿ ಅಧಿಕಾರಿಗಳೊಂದಿಗೆ ಪರಿಹಾರಗಳ ಕುರಿತು ಮಾತನಾಡುತ್ತಾನೆ. ಶೇಖರನ ಮಗ ರಜನೀಂದ್ರನ ಇಬ್ಬರು ಮಕ್ಕಳು ಅಂಗವಿಕಲರೂ ಬುದ್ಧಿಮಾಂದ್ಯರೂ ಆಗುವುದು, ರಜನೀಂದ್ರನ ಬಾಲ್ಯದ ಗೆಳೆಯ -ಬಹಳ ಗಟ್ಟಿಮುಟ್ಟಾಗಿ ಚಟುವಟಿಕೆಯಿಂದಿದ್ದ – ಜಯಂತ -ಇದ್ದಕ್ಕಿದ್ದಂತೆ ಪಾರ್ಶ್ವವಾಯು ಪೀಡಿತನಾಗಿ ನರಳುವುದು, ಹಳ್ಳಿಯ ಇನ್ನೂ ಅನೇಕರು ಇಂಥದೇ ರೋಗಗಳಿಗೆ ತುತ್ತಾಗುವುದು- ಇವೆಲ್ಲವೂ ಎಂಡೋಸಲ್ಫಾನ್ ಕಾರಣದಿಂದ ಎಂದು ಸಾಧಿಸಲು ಈಗಾಗಲೇ ಸಂಘಟನೆ-ಸಮಾಜಸೇವೆಗಳೆಂದು ಸಕ್ರಿಯರಾಗಿರುವ ಶೇಖರಬಲ್ಲಾಳ ಪ್ರಯತ್ನಿಸಿದರೆ ಸ್ವಾರ್ಥಿ ಶಿವರಾಮ ಆತನ ವಿರುದ್ಧ ನಿಂತು ಬಡಜನರಿಗೆ ಸರಕಾರದಿಂದ ಸಿಗಬಹುದಾದ ಪರಿಹಾರ – ಸವಲತ್ತುಗಳು ಸಿಗದಂತೆ ಮಾಡುತ್ತಾನೆ. ಲೇಖಕಿ ಇಲ್ಲಿ ವಿಜ್ಞಾನ ಮತ್ತು ಮಾನವೀಯತೆಗಳ ನಡುವಣ ಸಂಘರ್ಷವನ್ನು ಸೂಚಿಸುತ್ತಾರೆ.

ಸಂಗೀತದ  ಗುಣಾತ್ಮಕ   ಶಕ್ತಿಯ ಬಗ್ಗೆ ಸ್ವಾನುಭವದಿಂದ ಸಾಕಷ್ಟು ತಿಳಿದುಕೊಂಡಿರುವ, ಸಂಗೀತ ಸಾಧನೆಗಾಗಿ ಸಂಸಾರವನ್ನೇ ತ್ಯಜಿಸಿ ಬಂದಿರುವ ಮುಕ್ತಾತಾಯಿಯ ಪ್ರವೇಶವು ಕಥೆಗೊಂದು ಮಹತ್ವದ ತಿರುವನ್ನು ಕೊಡುತ್ತದೆ. ಕಾಯಿಲೆಯಿಂದ ಗಂಡ ಮತ್ತು ಮಗಳ ಚಾಕರಿ ಮಾಡಿ ಹೈರಾಣಾಗಿರುವ. ಜಯಂತನ ಹೆಂಡತಿ ಹರಿಣಾಕ್ಷಿಗೆ ಮುಕ್ತಾತಾಯಿ ಆಶಾಕಿರಣವಾಗುತ್ತಾಳೆ.‌ ಆ ಕಾರಣದಿಂದಲೇ ಮಗಳನ್ನು ಸಂಗೀತ ಚಿಕಿತ್ಸೆಯಿಂದ ಗುಣಪಡಿಸಬಹುದೆಂಬ ಭರವಸೆಯೊಂದಿಗೆ ಹರಿಣಾಕ್ಷಿ ಮುಕ್ತಾತಾಯಿಯೊಂದಿಗೆ ಮನೆ ಬಿಟ್ಟು ಹೊರಟು ಹೋಗುತ್ತಾಳೆ. ಕಾದಂಬರಿಯುದ್ದಕ್ಕೂ ಪರಿಸರ ಕಾಳಜಿಯ ಬಗ್ಗೆಯೂ ನಿಸರ್ಗದ ಮಹಾನ್ ಶಕ್ತಿಯ ಬಗ್ಗೆ ಮಾತನಾಡುತ್ತ ಬಂದ ಲೇಖಕಿ ಇಲ್ಲಿ ವಿಜ್ಞಾನ ಉಂಟು ಮಾಡಿದ ಅನಾಹುತವನ್ನು ಗುಣಪಡಿಸುವ ಸಾಮರ್ಥ್ಯ ನಿಸರ್ಗಕ್ಕೇ ಇದೆ ಎಂದು ಸಾಬೀತು ಪಡಿಸುತ್ತಾರೆ ಅನ್ನಿಸುತ್ತದೆ.

ಕಾದಂಬರಿಯ ಉದ್ದಕ್ಕೂ ತುಂಬಿರುವ ನಿಸರ್ಗದ ಸೊಬಗಿನ ವರ್ಣನೆ, ಕೃಷಿ-ಬೇಸಾಯಗಳಿಗೆ ಸಂಬಂಧಿಸಿದ ವಿಚಾರಗಳು, ಹಳ್ಳಿಯ ಮಂದಿ ದನ-ಕರು-ನಾಯಿಗಳೊಂದಿಗೆ ಇಟ್ಟುಕೊಳ್ಳುವ ಆತ್ಮೀಯ ಬಂಧಗಳು, ಜಾತಿ-ಧರ್ಮಗಳ ಭೇದವಿಲ್ಲದೆ ಎಲ್ಲರೂ ಸೌಹಾರ್ದದಿಂದ ಜೊತೆಯಾಗಿ ಬದುಕುವುದು -ಮೊದಲಾದ ಅಂಶಗಳು ಕಾದಂಬರಿಗೆ ಮೆರುಗನ್ನಿತ್ತಿವೆ. ಶಾಸ್ತ್ರೀಯ ಸಂಗೀತದ ಕುರಿತಾದ ಒಳನೋಟಗಳು ವಿದ್ವತ್ಪೂರ್ಣವಾಗಿವೆಯಾದರೂ ಮುಕ್ತಾಬಾಯಿಯ ಪಾತ್ರದ ಹಿನ್ನೆಲೆ ಅಗತ್ಯಕ್ಕಿಂತ ಹೆಚ್ಚು ದೀರ್ಘವಾಗಿದ್ದು ಕಾದಂಬರಿಯ ಮುಖ್ಯ ಕಥಾಹಂದರದಿಂದ ತುಸು ಹೊರಚಾಚುವಂತೆ ಕಾಣುತ್ತದೆ. ಆದರೂ ಸಂಗೀತ ಚಿಕಿತ್ಸೆಯನ್ನು ವಿಜ್ಞಾನಕ್ಕೆ ಎದುರಾಗಿ ನಿಲ್ಲಿಸಿ ಭರವಸೆ ಮೂಡಿಸುವ ಲೇಖಕಿಯ ಕಾಣ್ಕೆ, ಒಂದು ಹೊಸಹೆಜ್ಜೆಯೆಂದೇ ಹೇಳಬೇಕು.

ಕಾದಂಬರಿಯ ಆರಂಭದಲ್ಲಿ ರಾಮಶರ್ಮರ ಮನೆಗೆ ಗಡಿನಾಡು ಪ್ರದೇಶದ  ಕನ್ನಡ ಹೋರಾಟಗಾರ ಗೋಪರಾಯರ ಪ್ರವೇಶದೊಂದಿಗೆ ಕಾಸರಗೋಡಿನಲ್ಲಿ ಕನ್ನಡದ ಉಳಿವಿಗಾಗಿ ನಡೆದ ಚಳುವಳಿಯ ವಿವರಗಳೂ, ಕೇರಳದ ಕಮ್ಯೂನಿಸ್ಟ್ ಸರಕಾರವು ತಂದ ಭೂಮಸೂದೆಯಿಂದಾಗಿ ಪ್ರಾಮಾಣಿಕವಾಗಿ ಕೃಷಿಕೆಲಸಗಳನ್ನು ನಡೆಸುತ್ತಿದ್ದ ಭೂಮಾಲೀಕರು ಅನುಭವಿಸಿದ ಕಷ್ಟಗಳು, ಕಮ್ಯೂನಿಸ್ಟ್‌ ಚಳುವಳಿಗಾರರು ನಡೆಸಿದ ಹಿಂಸಾಕೃತ್ಯಗಳು ಮೊದಲಾದ ವಿವರಗಳು ಸಿಗುತ್ತವೆ.

ಸ್ತ್ರೀಪರ ದೃಷ್ಟಿಯಿಂದ ಕಾದಂಬರಿಯನ್ನು ಓದುವವರಿಗೆ ಸಾಕಷ್ಟು ಶಕ್ತಿಯುತ ಪಾತ್ರಗಳು ಇಲ್ಲಿ ಕಾಣಸಿಗುತ್ತವೆ.  ತನ್ನ ಧ್ಯೇಯಸಾಧನೆಗಾಗಿ ಸಂಸಾರವನ್ನು ತ್ಯಜಿಸಿ ಹೋಗುವ ಮುಕ್ತಾತಾಯಿ, ಅಶಿಕ್ಷಿತಳಾದರೂ ತನ್ನ ಮಗಳಿಗೋಸ್ಕರ ಹಲವಾರು ಪ್ರತಿಕೂಲ ಪರಿಸ್ಥಿತಿಗಳನ್ನೆದುರಿಸಿ, ಸಂಸಾರದಿಂದ ದೂರವಾಗುವ ದಿಟ್ಟ ನಿರ್ಧಾರವನ್ನು ಸ್ವತಂತ್ರವಾಗಿ ಕೈಗೊಳ್ಳುವ ಹರಿಣಾಕ್ಷಿ,   ಬಡತನದ ಬೇಗೆಯಲ್ಲೂ ಸಂಸಾರವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವ ರಾಧಮ್ಮ, ಬದುಕಿನಲ್ಲಿ ಏನನ್ನಾದರೂ ಸಾಧಿಸಲೇ ಬೇಕೆಂದು  ಬಹಳಷ್ಟು ಶ್ರಮಿಸುವ ಸುಭಾಷಿಣಿ- ಎಲ್ಲರೂ ಸ್ತ್ರೀಶಕ್ತಿಯ ಸಂಕೆತಗಳಾಗಿ ನಿಲ್ಲುತ್ತಾರೆ.

ಹಳ್ಳಿಯಲ್ಲಿ ನಡೆಯುವ ಪಲ್ಲಟಗಳಿಗೆ ಸಾಕ್ಷಿಯಾಗಿ ನಿಲ್ಲುವ ಪಕ್ಕಿಹಳ್ಳದ ಜುಳು ಜುಳು ನೀರು, ಅದರ ಇಕ್ಕೆಲಗಳಲ್ಲಿ ತುಂಬಿರುವ ಗಿಡಮರಗಳ ಹಸುರು, ಜೀವದಾನಿ ಔಷಧೀಯ ಸಸ್ಯಗಳಿಂದ ಸಮೃದ್ಧವಾದ ಪ್ರಕೃತಿ. -ಪರಿಸರಗಳು ಎಂದೂ ನಾಶವಾಗದೆ ಉಳಿಯುವ ಸೋಜಿಗವೂ ಓದುಗರ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ. ಅದರೆ ರಬ್ಬರಿನಂಥ ಲಾಭದಾಯಕ ಕೃಷಿಗೆ ಮನುಷ್ಯ ಎಲ್ಲೆಲ್ಲ ಕೈಹಾಕುತ್ತಾನೋ ಅಲ್ಲೆಲ್ಲ ಪರಿಸರಕ್ಕೆ ಹಾನಿಯುಂಟು ಮಾಡಿ ಸ್ವತಃ ಕೈಸುಟ್ಟುಕೊಂಡಿದ್ದಾನೆ. ಇದರ ವಿರುದ್ದ ಪ್ರಜ್ಣಾವಂತರು ನಡೆಸುವ ಹೋರಾಟವನ್ನು    ಪರಿಸರ ಸ್ತ್ರೀವಾದದ ದೃಷ್ಟಿಯಿಂದಲೂ ಅಧ್ಯಯನ ಮಾಡಬಹುದಾಗಿದೆ. ಹೀಗೆ ನೂರಾರು ವಿಚಾರಗಳ ಬಗೆಗಿನ ವಿಸ್ತಾರವಾದ ನೋಟವು ಕಾದಂಬರಿಗೆ ಒಂದು ಗಟ್ಟಿತನವನ್ನು ಒದಗಿಸಿದೆ.

ಡಾ.ಪಾರ್ವತಿ ಜಿ.ಐತಾಳ್

ಕೃತಿಯ ಹೆಸರು :  ಪಕ್ಕಿಹಳ್ಳದ ಹಾದಿಗುಂಟ(ಕಾದಂಬರಿ)

ಲೇಖಕಿ : ಅನುಪಮಾ ಪ್ರಸಾದ್

ಪ್ರ : ಪಲ್ಲವ ಪ್ರಕಾಶನ

ಪ್ರಕಟಣಾ ವರ್ಷ ; 2019

ಪುಟಗಳು : 346

ಬೆಲೆ : ರೂ. 300

ಇದನ್ನೂ ಓದಿ : ರಸ್ತೆಯಲ್ಲಿ ದಂಡ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಚಳಿ ಬಿಡಿಸಿದ ಸ್ಪೀಕರ್ ರಮೇಶ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next