ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ಥಾನ ಪ್ರಸಕ್ತ ವರ್ಷ 5,100 ಬಾರಿ ಕದನ ವಿರಾಮ ಉಲ್ಲಂ ಸಿ ಗುಂಡು ಹಾರಿಸಿದೆ. ಇದರಿಂದಾಗಿ 24 ಮಂದಿ ಭದ್ರತಾ ಸಿಬಂದಿಯೂ ಸೇರಿ 36 ಮಂದಿ ಸಾವಿಗೀಡಾಗಿದ್ದಾರೆ ಮತ್ತು 130ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಹದಿನೆಂಟು ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಗರಿಷ್ಠ ಪ್ರಮಾಣದ್ದು ಎಂದು ಸೇನೆಯ ಹಿರಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. 2003ರಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಮಾಡಿಕೊಂಡ ಕದನ ವಿರಾಮ ಜಾರಿಯಾದ ಬಳಿಕ ಗರಿಷ್ಠ ಪ್ರಮಾಣದ ಉಲ್ಲಂಘನೆ. ಪ್ರತೀ ದಿನ ಸರಾಸರಿ 14 ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ನಡೆದಿವೆ ಎಂದು ಸೇನೆಯ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ಥಾನದ ಈ ಧೋರಣೆಯಿಂದಾಗಿ 2003ರ ಒಪ್ಪಂದ ಸುಸೂತ್ರವಾಗಿ ಜಾರಿಯಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಸಕ್ತ ವರ್ಷ ಪಾಕಿಸ್ಥಾನ ನಡೆಸಿರುವ ಒಪ್ಪಂದ ಉಲ್ಲಂಘನೆಯನ್ನು 2017ನೇ ವರ್ಷಕ್ಕೆ ಹೋಲಿಕೆ ಮಾಡಿದರೆ ಐದು ಪಟ್ಟು ಹೆಚ್ಚಾಗಿದೆ. ಆ ವರ್ಷ 971 ಪ್ರಕರಣಗಳಲ್ಲಿ 31 ಮಂದಿ ಅಸುನೀಗಿ, 151 ಮಂದಿ ಗಾಯಗೊಂಡಿದ್ದರು.
2019ರಲ್ಲಿ 3, 289 ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ನಡೆದಿವೆ. ಈ ಪೈಕಿ 1,565 ಪ್ರಕರಣಗಳು ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ನಡೆದಿವೆ. 2018ರಲ್ಲಿ 2,936 ಘಟನೆಗಳು ನಡೆದಿವೆ. ಅಂದರೆ ಸರಾಸರಿ ದಿನಕ್ಕೆ ಎಂಟು ಪ್ರಕರಣಗಳು ನಡೆದಿವೆ. ಆ ವರ್ಷ 61 ಮಂದಿ ಅಸುನೀಗಿ, 250 ಮಂದಿ ಗಾಯಗೊಂಡಿದ್ದಾರೆ. 2004, 2005 ಮತ್ತು 2006ರಲ್ಲಿ ಯಾವುದೇ ಉಲ್ಲಂಘನೆ ಪ್ರಕರಣ ನಡೆದಿರಲಿಲ್ಲ. ಗಡಿ ಪ್ರದೇಶದಲ್ಲಿ ನೆಲೆಸಿರುವ ಜಮ್ಮು, ಕಥುವಾ, ಕುಪ್ವಾರಾ ಮತ್ತು ಬಾರಾಮುಲ್ಲಾ, ಸಾಂಬಾ, ರಜೌರಿ ಮತ್ತು ಪೂಂಛ… ಜಿಲ್ಲೆಗಳಲ್ಲಿ ಪಾಕಿಸ್ಥಾನ ಯೋಧರು ಹಾರಿಸುವ ಗುಂಡಿನಿಂದ ತೀವ್ರ ಪ್ರಮಾಣದಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ. ಪಾಕಿಸ್ಥಾನದ ಜತೆಗೆ ಭಾರತ 3,232 ಕಿ.ಮೀ. ಗಡಿ ಪ್ರದೇಶ ಹೊಂದಿಕೊಂಡಿದೆ. ಈ ಪೈಕಿ 221 ಕಿ.ಮೀ. ಅಂತಾರಾಷ್ಟ್ರೀಯ ಗಡಿ, 740 ಕಿಮೀ ಎಲ್‌ಒಸಿ ವ್ಯಾಪ್ತಿಯಲ್ಲಿದೆ.