Advertisement

ಶಾದಾಬ್‌ ಖಾನ್‌ಗೆ ಶರಣಾದ ದಕ್ಷಿಣ ಆಫ್ರಿಕಾ: ಇನ್ನೂ ಅನೇಕ ಜಿಗುಟು ಲೆಕ್ಕಾಚಾರ

10:38 PM Nov 03, 2022 | Team Udayavani |

ಸಿಡ್ನಿ: ಶಾದಾಬ್‌ ಖಾನ್‌ ತಮ್ಮ “ಸ್ಪೆಷಲ್‌ ಆಲ್‌ರೌಂಡ್‌’ ಪ್ರದರ್ಶನದ ಮೂಲಕ ಪಾಕಿಸ್ಥಾನದ ಟಿ20 ವಿಶ್ವಕಪ್‌ ಸೆಮಿಫೈನಲ್‌ ಆಸೆಗೆ ಕೊಂಚ ಜೀವ ತುಂಬಿದ್ದಾರೆ. ಗುರುವಾರ ಸಿಡ್ನಿಯಲ್ಲಿ ಸಾಗಿದ 2ನೇ ವಿಭಾಗದ ಅತ್ಯಂತ ಮಹತ್ವದ ಮುಖಾಮುಖೀಯಲ್ಲಿ ಪಾಕ್‌ ಡಿ-ಎಲ್‌ ನಿಯಮದಂತೆ ದಕ್ಷಿಣ ಆಫ್ರಿಕಾವನ್ನು 33 ರನ್ನುಗಳಿಂದ ಸೋಲಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 9 ವಿಕೆಟಿಗೆ 185 ರನ್ನುಗಳ ಬೃಹತ್‌ ಮೊತ್ತ ದಾಖಲಿಸಿತು. ದಕ್ಷಿಣ ಆಫ್ರಿಕಾದ ಚೇಸಿಂಗ್‌ ವೇಳೆ ಮಳೆ ಸುರಿಯಿತು. 14 ಓವರ್‌ಗಳಲ್ಲಿ 142 ರನ್‌ ಟಾರ್ಗೆಟ್‌ ಸಿಕ್ಕಿತು. ಆದರೆ ಬವುಮ ಬಳಗ 9 ವಿಕೆಟಿಗೆ 108 ರನ್‌ ಮಾಡಿ ಕೂಟದಲ್ಲಿ ಮೊದಲ ಸೋಲನುಭವಿಸಿತು.

ಶಾದಾಬ್‌ ಖಾನ್‌ ಶೋ
ಪಾಕ್‌ ಇನ್ನಿಂಗ್ಸ್‌ಗೆ ರಕ್ಷಣೆ ಒದಗಿಸಿದ್ದು ಶಾದಾಬ್‌ ಖಾನ್‌ ಮತ್ತು ಇಫ್ತಿಖಾರ್‌ ಅಹ್ಮದ್‌ ಅವರ ಅರ್ಧ ಶತಕದ ಆಟ. ಫ‌ಖರ್‌ ಜಮಾನ್‌ ಬದಲು ತಂಡ ಪ್ರವೇಶಿಸಿದ ಮೊಹಮ್ಮದ್‌ ಹ್ಯಾರಿಸ್‌ ಮತ್ತು ಮೊಹಮ್ಮದ್‌ ನವಾಜ್‌ ತಲಾ 28 ರನ್‌ ಹೊಡೆದರು.

ಶಾದಾಬ್‌ ಕೇವಲ 22 ಎಸೆತಗಳಿಂದ 52 ರನ್‌ ಬಾರಿಸಿದರು. 3 ಬೌಂಡರಿ, 4 ಸಿಕ್ಸರ್‌ ಸಿಡಿಸಿ ಆಫ್ರಿಕಾ ಬೌಲರ್‌ಗಳ ಮೇಲೆರಗಿದರು. ಇಫ್ತಿಖಾರ್‌ ಕೊಡುಗೆ 35 ಎಸೆತಗಳಿಂದ 51 ರನ್‌ (3 ಬೌಂಡರಿ, 2 ಸಿಕ್ಸರ್‌).

ಎಂದಿನಂತೆ ಈ ಪಂದ್ಯದಲ್ಲೂ ಪಾಕಿಸ್ಥಾನ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿತು. 7ನೇ ಓವರ್‌ ವೇಳೆ 43 ರನ್ನಿಗೆ 4 ವಿಕೆಟ್‌ ಉದುರಿ ಹೋಯಿತು. ರಿಜ್ವಾನ್‌ (4), ನಾಯಕ ಬಾಬರ್‌ ಆಜಂ (6), ಶಾನ್‌ ಮಸೂದ್‌ (2) ಅಗ್ಗಕ್ಕೆ ಔಟಾದರು.

Advertisement

ಬೌಲಿಂಗ್‌ನಲ್ಲೂ ಘಾತಕವಾಗಿ ಪರಿಣಮಿಸಿದ ಶಾದಾಬ್‌ ಖಾನ್‌ ಒಂದೇ ಓವರ್‌ನಲ್ಲಿ ಟೆಂಬ ಬವುಮ ಮತ್ತು ಐಡನ್‌ ಮಾರ್ಕ್‌ರಮ್‌ ವಿಕೆಟ್‌ ಹಾರಿಸಿ ಪಾಕಿಸ್ಥಾನದ ಗೆಲುವನ್ನು ಖಚಿತಗೊಳಿಸಿದರು. ಇದಕ್ಕೂ ಮೊದಲು ಶಾಹೀನ್‌ ಅಫ್ರಿದಿ ತಮ್ಮ ಮೊದಲೆರಡು ಓವರ್‌ಗಳಲ್ಲಿ ಡೇಂಜರಸ್‌ ಬ್ಯಾಟರ್‌ಗಳಾದ ಕ್ವಿಂಟನ್‌ ಡಿ ಕಾಕ್‌ (0) ಮತ್ತು ರಿಲೀ ರೋಸ್ಯೂ (7) ಅವರನ್ನು ಉರುಳಿಸಿ ದಕ್ಷಿಣ ಆಫ್ರಿಕಾ ಪಾಳೆಯದ ಮೇಲೆ ಅಪಾಯದ ಬಾವುಟ ಹಾರಿಸಿದ್ದರು.

ಮಳೆ ಬಂತು ಮಳೆ!
ಎಂದಿನಂತೆ ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆ ಹಾಜರಿ ಕೊಟ್ಟಿತು. ಹರಿಣಗಳ ಆಗಿನ ಸ್ಥಿತಿ 9 ಓವರ್‌ಗಳಲ್ಲಿ 4ಕ್ಕೆ 69 ರನ್‌. ಪಂದ್ಯ ಇಲ್ಲಿಗೇ ನಿಂತಿದ್ದರೂ ಡಿ-ಎಲ್‌ ನಿಯಮದಂತೆ ಪಾಕಿಸ್ಥಾನ ಗೆಲ್ಲುತ್ತಿತ್ತು. ಆದರೆ ಮಳೆ ನಿಂತ ಬಳಿಕ ಟಾರ್ಗೆಟ್‌ ಬದಲಾಯಿತು. ದಕ್ಷಿಣ ಆಫ್ರಿಕಾ ಉಳಿದ 5 ಓವರ್‌ಗಳಲ್ಲಿ 73 ರನ್‌ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು.

ರವಿವಾರ ಮೂರು ದೇಖಾವೆ!
ಇದು ಪಾಕಿಸ್ಥಾನಕ್ಕೆ ಒಲಿದ ಕೇವಲ 2ನೇ ಗೆಲುವು. ಅಕಸ್ಮಾತ್‌ ಅದು ಸೋತದ್ದೇ ಆದರೆ ಕೂಟದಿಂದ ಹೊರಬೀಳುತ್ತಿತ್ತು. ದಕ್ಷಿಣ ಆಫ್ರಿಕಾದ ಸೆಮಿಫೈನಲ್‌ ಖಾತ್ರಿಯಾಗುತ್ತಿತ್ತು. ಆದರೀಗ ನಾಕೌಟ್‌ ಟಿಕೆಟ್‌ಗಾಗಿ ರವಿವಾರದ ತನಕ ಕಾಯಬೇಕಿದೆ. ಅಂದು ಮೂರು “ದೇಖಾವೆ’ಗಳಿವೆ. 2ನೇ ವಿಭಾಗದ ಕೊನೆಯ ಮೂರೂ ಸೂಪರ್‌-12 ಪಂದ್ಯಗಳು ರವಿವಾರವೇ ನಡೆಯಲಿರುವುದು ವಿಶೇಷ.

ಈ ಜಯದೊಂದಿಗೆ ಪಾಕಿಸ್ಥಾನ 5ನೇ ಸ್ಥಾನದಿಂದ ಮೂರಕ್ಕೆ ನೆಗೆದಿದೆ. 4 ಅಂಕಗಳನ್ನು ಹೊಂದಿರುವ ಅದು ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಇಲ್ಲಿ ಬಾಬರ್‌ ಪಡೆ ಗೆಲ್ಲಲೇಬೇಕು. ಆಗ ಪಾಕ್‌ ಅಂಕ 6ಕ್ಕೆ ಏರಲಿದೆ. ಗೆದ್ದರೆ ಬಾಂಗ್ಲಾಕ್ಕೂ ಕ್ಷೀಣ ಅವಕಾಶವಿದೆ.

ರವಿವಾರದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಷ್ಟೇನೂ ಬಲಿಷ್ಠವಲ್ಲದ ನೆದರ್ಲೆಂಡ್ಸ್‌ ವಿರುದ್ಧ ಸೆಣಸಲಿದೆ. ಇಲ್ಲಿ ಹರಿಣಗಳ ಗೆಲುವನ್ನು ನಿರೀಕ್ಷಿಸಲಡ್ಡಿಯಿಲ್ಲ. ಅಗ ಅದು 7 ಅಂಕಗಳೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ. ದ್ವಿತೀಯ ಪಂದ್ಯದಲ್ಲಿ ಪಾಕಿಸ್ಥಾನ-ಬಾಂಗ್ಲಾದೇಶ ಸೆಣಸಲಿವೆ. ಈ ಎರಡೂ ಪಂದ್ಯಗಳ ತಾಣ ಅಡಿಲೇಡ್‌. ಕೊನೆಯ ಪಂದ್ಯದಲ್ಲಿ ಎದುರಾಗುವ ತಂಡಗಳು ಭಾರತ-ಜಿಂಬಾಬ್ವೆ. ಇಲ್ಲಿಗೆ ಸೂಪರ್‌-12 ಹಂತ ಮುಗಿಯಲಿದೆ. ಮೆಲ್ಬರ್ನ್ನ ಲ್ಲಿ ನಡೆಯಲಿರುವ ಈ ಮುಖಾಮುಖೀಯಲ್ಲಿ . ಭಾರತವೇ ಫೇವರಿಟ್‌. ದಿನದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಅಂತಿಮ ಪಂದ್ಯದಲ್ಲಿ ಭಾರತ ಜಯಿಸಿದರೆ ಆಗ ಪಾಕಿಸ್ಥಾನ ವಿಶ್ವಕಪ್‌ಗೆ ಗುಡ್‌ಬೈ ಹೇಳಬೇಕಾಗುತ್ತದೆ.

ಇಲ್ಲಿ ಇನ್ನೂ ಅನೇಕ ಜಿಗುಟು ಲೆಕ್ಕಾಚಾರಗಳಿವೆ. ಭಾರತ ಸೋತರೆ, ಜಿಂಬಾಬ್ವೆ ಗೆದ್ದರೆ, ಬಾಂಗ್ಲಾ ವಿಜಯಿಯಾದರೆ, ನೆದರ್ಲೆಂಡ್ಸ್‌ ಏನಾದರೂ ಹರಿಣಗಳನ್ನು ಬಲೆಗೆ ಬೀಳಿಸಿದರೆ, ಮಳೆ ಸುರಿದರೆ… ಹೀಗೆ ಸಾಗುತ್ತದೆ!.

ಸಂಕ್ಷಿಪ್ತ ಸ್ಕೋರ್‌:
ಪಾಕಿಸ್ಥಾನ-20 ಓವರ್‌ಗಳಲ್ಲಿ 9 ವಿಕೆಟಿಗೆ 185 (ಶಾದಾಬ್‌ 52, ಇಫ್ತಿಖಾರ್‌ 51, ಹ್ಯಾರಿಸ್‌ 28, ನವಾಜ್‌ 28, ನೋರ್ಜೆ 41ಕ್ಕೆ 4). ದಕ್ಷಿಣ ಆಫ್ರಿಕಾ-14 ಓವರ್‌ಗಳಲ್ಲಿ 9 ವಿಕೆಟಿಗೆ 108 (ಬವುಮ 36, ಮಾರ್ಕ್‌ರಮ್‌ 20, ಸ್ಟಬ್ಸ್ 18, ಅಫ್ರಿದಿ 14ಕ್ಕೆ 3, ಶಾದಾಬ್‌ 16ಕ್ಕೆ 2). ಪಂದ್ಯಶ್ರೇಷ್ಠ: ಶಾದಾಬ್‌ ಖಾನ್‌.

Advertisement

Udayavani is now on Telegram. Click here to join our channel and stay updated with the latest news.

Next