ಮುಂಬಯಿ : ಅಮೆರಿಕದಿಂದ ಅಂತಾರಾಷ್ಟ್ರೀಯ ಉಗ್ರನೆಂದು ಘೋಷಿಸಲ್ಪಟ್ಟಿರುವ ಹಾಗೂ ಮುಂಬಯಿ ಸರಣಿ ಬಾಂಬ್ ನ್ಪೋಟಕ್ಕೆ ಸಂಬಂಧಿಸಿ ಭಾರತದ ಮೋಸ್ಟ್ ವಾಂಟೆಡ್ ಭೂಗತ ಜಗತ್ತಿನ ಪಾತಕಿ ಎನಿಸಿರುವ ದಾವೂದ್ ಇಬ್ರಾಹಿಂ ಭಾರತಕ್ಕೆ ಮರಳುವ ಯಾವುದೇ ಆಲೋಚನೆಯನ್ನು ಹೊಂದಿಲ್ಲ ಎಂದು ಈಗ ಪೊಲೀಸ್ ಕಸ್ಟಡಿಯಲ್ಲಿ ತನಿಖೆಗೆ ಗುರಿಯಾಗಿರುವ ಆತನ ಸಹೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್ ಹೇಳಿದ್ದಾನೆ.
1993ರ ಮುಂಬಯಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಆಗಿರುವ ದಾವೂದ್ ಇಬ್ರಾಹಿಂ ಒಂದೊಮ್ಮೆ ಭಾರತಕ್ಕೆ ಮರಳ ಬಯಸಿದರೂ ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಆತನಿಗೆ ಅನುಮತಿ ನೀಡುವುದಿಲ್ಲ ಎಂದು ಕಸ್ಕರ್ ಹೇಳಿದ್ದಾನೆ.
ಒಂದೊಮ್ಮೆ ದಾವೂದ್ ಭಾರತಕ್ಕೆ ಮರಳಿದರೆ ತನ್ನ ರಹಸ್ಯಗಳೆಲ್ಲ ಬಯಲಾದಾವು ಮತ್ತು ಅದರಿಂದ ತನಗೆ ಇರಿಸು ಮುರಿಸಿನ ಸ್ಥಿತಿ ಉಂಟಾಗಬಹುದು ಎಂಬ ಶಂಕೆ ಐಎಸ್‌ಐಗೆ ಕಾಡುತ್ತಿದೆ ಎಂದು ಕಸ್ಕರ್ ಹೇಳಿದ್ದಾನೆ.
ಕೆಲವು ವರ್ಷಗಳ ಹಿಂದೆ ದಾವೂದ್ ಇಬ್ರಾಹಿಂ ಭಾರತಕ್ಕೆ ಮರಳಲು ಬಯಸಿದ್ದಾನೆ ಎಂಬ ವರದಿಗಳು ಭಾರೀ ಸುದ್ದಿ ಮಾಡಿದ್ದವು.
ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರು 2015ರಲ್ಲಿ ತಾನು ಲಂಡನ್‌ನಲ್ಲಿ ದಾವೂದ್‌ನನ್ನು ಭೇಟಿಯಾಗಿರುವುದಾಗಿಯೂ ಆತ ಭಾರತಕ್ಕೆ ಮರಳಲು ಬಯಸಿರುವುದಾಗಿಯೂ ಹೇಳಿ ಅಚ್ಚರಿ ಉಂಟುಮಾಡಿದ್ದರು.
ತೀರ ಈಚೆಗೆ ಎಂಎನ್‌ಎಸ್‌ನ ರಾಜ್ ಠಾಕ್ರೆ ಅವರು, “ದಾವೂದ್ ಭಾರತಕ್ಕೆ ಮರಳುವ ನಿಟ್ಟಿನಲ್ಲಿ ಕೇಂದ್ರ ಸರಕಾರದೊಂದಿಗೆ ಚೌಕಾಶಿ ನಡೆಸುತ್ತಿದ್ದಾನೆ’ ಎಂದು ಹೇಳಿದ್ದರು.