ಇಸ್ಲಾಮಾಬಾದ್ : ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 2022 ರಲ್ಲಿ ಅಧಿಕಾರದಿಂದ ಹೊರಹಾಕಿದ ನಂತರ ಅಧಿಕೃತ ರಹಸ್ಯಗಳನ್ನು ಬಹಿರಂಗಪಡಿಸಿದ ಆರೋಪದ ಮೇಲೆ ನ್ಯಾಯಾಲಯವು ದೋಷಾರೋಪಣೆ ಮಾಡಿದೆ.
ಇಮ್ರಾನ್ ಖಾನ್ ಅವರೀಗ ಸಂಭವನೀಯ ಮರಣದಂಡನೆ ಶಿಕ್ಷೆಯನ್ನು ಎದುರಿಸಬಹುದು. ಖಾನ್ ಮತ್ತು ಆಪ್ತ ಸಹಾಯಕ ಶಾ ಮಹಮೂದ್ ಖುರೇಷಿ ಈ ವಾರ ವಿಚಾರಣೆಗೆ ಒಳಪಡಲಿರುವುದರಿಂದ ಜನವರಿಯಲ್ಲಿ ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಇಮ್ರಾನ್ ಖಾನ್ ಅವರ ವಕೀಲರಲ್ಲಿ ಒಬ್ಬರಾದ ಉಮೈರ್ ನಿಯಾಜಿ ಪ್ರಕಾರ, ಆರೋಪವು ಜೀವಾವಧಿ ಶಿಕ್ಷೆಯಿಂದ ಮರಣದಂಡನೆಯವರೆಗೆ ಶಿಕ್ಷೆಯನ್ನು ಹೊಂದಿದೆ.
2022 ರಲ್ಲಿ ಸಂಸತ್ತಿನಲ್ಲಿ ನಡೆದ ಅವಿಶ್ವಾಸ ಮತದಲ್ಲಿ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ರ್ಯಾಲಿಯಲ್ಲಿ ಇಮ್ರಾನ್ ಖಾನ್ ಅವರ ಭಾಷಣ ಮತ್ತು ಗೌಪ್ಯ ರಾಜತಾಂತ್ರಿಕ ಪತ್ರವನ್ನು ಬಿಟ್ಟುಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ.
ಇಮ್ರಾನ್ ಖಾನ್ ಅವರು ನ್ಯಾಯಾಂಗ ನಿಂದನೆ, ಭಯೋತ್ಪಾದನೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ಸೇರಿದಂತೆ 150 ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆಗಸ್ಟ್ ಆರಂಭದಲ್ಲಿ ಭ್ರಷ್ಟಾಚಾರಕ್ಕಾಗಿ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ನಂತರ ಇಸ್ಲಾಮಾಬಾದ್ ಹೈಕೋರ್ಟ್ ಆ ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ಆದರೆ ಸೈಫರ್ ಪ್ರಕರಣದಲ್ಲಿ ಅವರನ್ನು ಆಗಸ್ಟ್‌ನಲ್ಲಿ ಮತ್ತೆ ಬಂಧಿಸಲಾಗಿತ್ತು.
ಸದ್ಯಕ್ಕೆ ಇಮ್ರಾನ್ ಖಾನ್ ಜನವರಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಲ್ಲ. ತಮ್ಮ ಕಕ್ಷಿದಾರರಿಗೆ ನ್ಯಾಯಯುತ ವಿಚಾರಣೆಯನ್ನು ನಿರಾಕರಿಸಲಾಗುತ್ತಿದೆ ಎಂದು ಇಮ್ರಾನ್ ಖಾನ್ ಪರ ವಕೀಲರು ಹೇಳಿದ್ದಾರೆ.