ಇಸ್ಲಾಮಾಬಾದ್ : ಭಾರತದ ಕಟು ಹೇಳಿಕೆಯಿಂದ ಕೆರಳಿರುವ ಪಾಕಿಸ್ಥಾನದ ನಾಯಕರು ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಆಕ್ಷೇಪಾರ್ಹ ಭಾಷೆಯ ಬಳಕೆಗೆ ಇಳಿದಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, ”ಒಸಾಮಾ ಬಿನ್ ಲಾಡೆನ್ ಸತ್ತಿದ್ದರೂ, ಗುಜರಾತ್‌ನ ಕಟುಕ ಇನ್ನೂ ಜೀವಂತವಾಗಿದ್ದಾನೆ. ಆತ ಭಾರತದ ಪ್ರಧಾನಿಯಾಗುವ ಮೊದಲು ಯುಎಸ್‌ಎಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು” ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
”ಪಾಕಿಸ್ಥಾನ ಭಾರತಕ್ಕಿಂತ ಹೆಚ್ಚಿನ ಜೀವಗಳನ್ನು ಭಯೋತ್ಪಾದನೆಯಲ್ಲಿ ಕಳೆದುಕೊಂಡಿದೆ ಹಾಗಾಗಿ ಭಯೋತ್ಪಾದನೆಯನ್ನು ಬೆಂಬಲಿಸುವ ಯಾವುದೇ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
“ಪಾಕಿಸ್ಥಾನದಲ್ಲಿ ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಮತ್ತು ಸರಾಸರಿ ಜನರು ಭಯೋತ್ಪಾದನೆಯ ದುಷ್ಕರ್ಮಿಗಳ ಬಲಿಪಶುಗಳಾಗಿದ್ದಾರೆ. ನಾವು ಭಯೋತ್ಪಾದನೆಗೆ ಭಾರತಕ್ಕಿಂತ ಹೆಚ್ಚು ಜೀವಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ಸ್ವಂತ ಜನರು ಏಕೆ ನರಳಬೇಕೆಂದು ನಾವು ಬಯಸುತ್ತೇವೆ? ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ ಆದರೆ ಗುಜರಾತಿನ ಕಟುಕ ಬದುಕಿದ್ದು, ಭಾರತದ ಪ್ರಧಾನ ಮಂತ್ರಿ ಎಂದು ನಾನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಿಗೆ ನೆನಪಿಸಲು ಬಯಸುತ್ತೇನೆ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹೇಳಿಕೆ ವಿರುದ್ಧ ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು,ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಲಾಗಿದೆ. ಸಾಮಾಜಿಕ ತಾಣಗಳಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.