ಬೆಂಗಳೂರು: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸೇರಿ ವಿದೇಶದಿಂದ ಬರುತ್ತಿದ್ದ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತನೆ ಮಾಡುತ್ತಿದ್ದ ಮತ್ತೊಂದು ಪ್ರಕರಣವನ್ನು ಭಾರತೀಯ ಸೇನೆಯ ಗುಪ್ತಚರ ಮಾಹಿತಿ ಆಧರಿಸಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಭೇದಿಸಿದ್ದಾರೆ.
ಐಎಸ್‌ಡಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾಡುತ್ತಿದ್ದ ಕೇರಳ ಮೂಲದ ಶರ್ಫೂದ್ದೀನ್(32) ಎಂಬಾತನನ್ನು ಬಂಧಿಸಲಾಗಿದೆ. ಸದ್ಯ ಆರೋಪಿ ಸಿಸಿಬಿ ಅಧಿಕಾರಿಗಳು ಮತ್ತು ಭಾರತೀಯ ಸೇನೆಯ ಗುಪ್ತಚರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಐಎಸ್‌ಎ ಸಂಸ್ಥೆ ಶರ್ಫೂದ್ದೀನ್ ಮೂಲಕ ಭಾರತದಲ್ಲಿ ಬೇಹುಗಾರಿಕೆ ಮಾಡುತ್ತಿತ್ತು ಎಂದು ಹೇಳಲಾಗಿದೆ. ಆರೋಪಿಯಿಂದ 58 ಸಿಮ್ ಬಾಕ್ಸ್‌ಗಳು ಮತ್ತು 2,144 ಸಿಮ್‌ಕಾರ್ಡ್‌ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ.
ನಾಲ್ಕೈದು ವರ್ಷಗಳ ಹಿಂದೆ ಕೇರಳದ ವೈಯನಾಡುನಿಂದ ಬೆಂಗಳೂರಿಗೆ ಬಂದಿರುವ ಆರೋಪಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ಬೇರೆ ರಾಜ್ಯದ ಕೆಲ ವ್ಯಕ್ತಿಗಳ ಸಹಕಾರದೊಂದಿಗೆ ಹೆಸರಘಟ್ಟ ಸಮೀಪದ ಭುವನೇಶ್ವರಿನಗರ, ಸಿದ್ದೇಶ್ವರ ಲೇಔಟ್, ಚಿಕ್ಕಸಂದ್ರ ಸೇರಿ ನಾಲ್ಕು ಕಡೆಗಳಲ್ಲಿ ಮನೆಗಳನ್ನು ಬಾಡಿಗೆ ಪಡೆದುಕೊಂಡಿದ್ದು, ನಾಲ್ಕು ಕಡೆಯೂ ಸಿಮ್ ಬಾಕ್ಸ್‌ಗಳನ್ನು ಅಳವಡಿಸಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತನೆ ಮಾಡುವ ಮೂಲಕ ಭಾರತೀಯ ಸಂಚಾರ ನಿಗಮ ಲಿಮಿಡೆಟ್‌ಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಂಗಳೂರು: ನಗರದಲ್ಲಿ ಮತ್ತೆ ಕಾಡುಕೋಣ! ಗ್ರಾಮಸ್ಥರಲ್ಲಿ ಆತಂಕ
Related Articles
ಬೇಹುಗಾರಿಕೆ ಮಾಡುತ್ತಿದ್ದ ಶರ್ಫೂದ್ದೀನ್!?
ಪಾಕಿಸ್ತಾನದ ಐಎಸ್‌ಐ ಸಂಸ್ಥೆ ಶರ್ಫೂದ್ದೀನ್‌ನ ಮೂಲಕ ಭಾರತದಲ್ಲಿ ಬೇಹುಗಾರಿಕೆ ಮಾಡುತ್ತಿತ್ತು ಎಂಬ ಅನುಮಾನ ಮೂಡಿದ್ದು, ಆರೋಪಿಯ ವಿಚಾರಣೆಯಿಂದ ಸತ್ಯಾಂಶ ಬೆಳಕಿಗೆ ಬರಲಿದೆ. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ತೆರಳಿದ ಪ್ರದೇಶಗಳ ಬಗ್ಗೆ ಭಾರತೀಯ ಸೇನೆ ಸಂಪೂರ್ಣವಾಗಿ ನಿಗಾವಹಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ರಾಜ್ಯ ಪ್ರವಾಸದ ವೇಳೆ ಸೇನೆಗೆ ಆರೋಪಿಯ ಕೃತ್ಯದ ಬಗ್ಗೆ ಶಂಕೆ ಬಂದಿತ್ತು ಎನ್ನಲಾಗಿದೆ. ಹೀಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುವ ಮೂಲಕ ಆತನನ್ನು ಬಂಧಿಸಲಾಗಿದೆ.
ಭಾರತೀಯ ಸೇನೆಯಿಂದ ಮಾಹಿತಿ
ಇತ್ತೀಚೆಗೆ ನಗರದಲ್ಲಿ ಪರಿವರ್ತನೆ ಕರೆಗಳ ಬಗ್ಗೆ ಹೆಚ್ಚು ನಿಗಾವಹಿಸಿರುವ ಭಾರತೀಯ ಸೇನೆಯ ಗುಪ್ತಚರ ವಿಭಾಗ ಆರೋಪಿಯ ಕೃತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿತ್ತು. ಬಳಿಕ ಸಿಸಿಬಿ ಜತೆ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸುತ್ತಿದ್ದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಪಾಕಿಸ್ತಾನದಿಂದ ಬರುತ್ತಿದ್ದ ಕರೆಗಳನ್ನು ಆರೋಪಿ ಪರಿವರ್ತನೆ ಮಾಡುತ್ತಿದ್ದ. ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳು, ಬೆಂಗಳೂರು ಸೇರಿ ದೇಶದ ವಿವಿಧೆಡೆ ಕರೆ ಮಾಡಿ ಭಾರತದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.