ನವದೆಹಲಿ: ಕೆಲವು ಜನರು ಸೆಲೆಬ್ರಿಟಿಗಳಂತೆ ಗುರುತಿಸಿಕೊಳ್ಳಲು, ವೇದಿಕೆಗಳಲ್ಲಿ ಅವರ ಹಾವ, ಭಾವ ಅನುಕರಿಸುವುದನ್ನು ಇಷ್ಟಪಡುತ್ತಾರೆ. ಕನ್ನಡದ ಸಾಹಸ ಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಶಂಕರ್ ನಾಗ್, ಬಾಲಿವುಡ್ ನ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ತದ್ರೂಪಿ ವ್ಯಕ್ತಿಗಳ ಬಗ್ಗೆ ಈಗಾಗಲೇ ನೋಡಿದ್ದೀರಿ. ಆದರೆ ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಹೋಲುವ ತದ್ರೂಪಿ ವ್ಯಕ್ತಿಯೊಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಬಸ್-ಎಸ್ ಯುವಿ ನಡುವೆ ಭೀಕರ ಅಪಘಾತ: 11 ಕಾರ್ಮಿಕರ ದುರಂತ ಅಂತ್ಯ
ತಲೈವಾ ರಜನಿಕಾಂತ್ ಅವರ ತದ್ರೂಪಿಯಾಗಿರುವ ಈ ವ್ಯಕ್ತಿ ಪಾಕಿಸ್ತಾನದ ನಿವಾಸಿಯಾಗಿದ್ದಾರೆ. 62 ವರ್ಷದ ರೆಹಮತ್ ಗಶ್ಕೋರಿ ಫೋಟೋ ಎಲ್ಲೆಡೆ ಹರಿದಾಡತೊಡಗಿದೆ. ನಿವೃತ್ತ ಸರ್ಕಾರಿ ಅಧಿಕಾರಿಯಾಗಿರುವ ರಹಮತ್ ಅವರು ಥೇಟ್ ಸೂಪರ್ ಸ್ಟಾರ್ ರಜನಿಕಾಂತ್ ಅವರಂತೆ ಹೋಲುತ್ತಿದ್ದಾರೆ.
ಈ ಕುರಿತು ಅರಬ್ ನ್ಯೂಸ್ ಗೆ ನೀಡಿರುವ ಸಂದರ್ಶನದಲ್ಲಿ ರೆಹಮತ್ ಮಾತನಾಡುತ್ತ, ಬಲೂಚಿಸ್ತಾನದ ಸಿಬಿಯಲ್ಲಿ ಡೆಪ್ಪುಟಿ ಕಮಿಷನರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ, ನನ್ನನ್ನು ನೋಡಿ ಎಲ್ಲರೂ ರಜನಿಕಾಂತ್ ಥರ ಕಾಣಿಸುತ್ತಿದ್ದೀರಿ ಎಂದು ಹೇಳುತ್ತಿದ್ದರು. ಆದರೆ ನಾನು ಆಗ ಹೆಚ್ಚು ಗಮನ ಕೊಟ್ಟಿರಲಿಲ್ಲವಾಗಿತ್ತು. ಆದರೆ ನಿವೃತ್ತಿಯಾದ ನಂತರ ನಾನು ಸಾಮಾಜಿಕ ಜಾಲತಾಣವನ್ನು ಉಪಯೋಗಿಸತೊಡಗಿದ್ದೆ. ಆಗ ಎಲ್ಲರೂ ನನ್ನನ್ನು ರಜನಿಕಾಂತ್ ಹೆಸರಿನಲ್ಲೇ ಕರೆಯತೊಡಗಿದ್ದರು. ಕೊನೆಗೆ ಅದ್ಭುತ ನಟ, ಮಾನವೀಯತೆ ಹೊಂದಿರುವ ವ್ಯಕ್ತಿಯನ್ನು ಹೋಲುವಂತೆ ದೇವರು ನನಗೆ ಆಶೀರ್ವಾದ ಮಾಡಿದ್ದಾರೆಂಬುದು ನನಗೆ ಮನವರಿಕೆಯಾದ ನಂತರ ಆ ಹೆಸರನ್ನು(ರಜನಿಕಾಂತ್) ಒಪ್ಪಿಕೊಂಡೆ ಎಂದು ತಿಳಿಸಿದ್ದಾರೆ.
ರಜನಿಕಾಂತ್ ಭೇಟಿಯಾಗುವ ಬಯಕೆ:
ರೆಹಮತ್ ಅವರನ್ನು ರಜನಿಕಾಂತ್ ಅವರ ತದ್ರೂಪಿ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದ ಬಳಿಕ ಇನ್ನಷ್ಟು ಜನಪ್ರಿಯರಾಗಿದ್ದಾರೆ. ಇದೀಗ ತಾನು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗಿ ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕು. ಯಾಕೆಂದರೆ ಒಬ್ಬರು ಭಾರತದ ರಜನಿಕಾಂತ್, ಮತ್ತೊಬ್ಬ ಪಾಕಿಸ್ತಾನಿ ರಜನಿಕಾಂತ್ ಎಂಬುದಾಗಿ ಜನರಿಗೆ ತೋರಿಸಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.