Advertisement

ಪಾಕ್‌ ದಂಪತಿ ಗಡಿಪಾರಿಗೆ ಮೇ 5ರ ಗಡುವು

12:47 AM Apr 27, 2019 | Team Udayavani |

ಬೆಂಗಳೂರು: “ಬೇರೆ ದೇಶದ ಅಪರಾಧಿಗಳು ನಮ್ಮ ನೆಲದಲ್ಲಿರಲು ಯೋಗ್ಯರಲ್ಲ. ಅವರಿಗಾಗಿ ಭಾರತದ ಪ್ರಜೆಗಳ ತೆರಿಗೆ ಹಣ ವೆಚ್ಚ ಮಾಡುವುದು ಸರಿಯಲ್ಲ. ಮೇಲಾಗಿ ಇದು ದೇಶದ ಭದ್ರತೆಗೆ ಅಪಾಯ.

Advertisement

ಆದ್ದರಿಂದ ಮದುವೆಯಾಗಲು ಭಾರತದ ಗಡಿ ಪ್ರವೇಶಿಸಿ ಬೆಂಗಳೂರಿಗೆ ಬಂದು ಇಲ್ಲಿಯೇ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನದ ದಂಪತಿ ಕಾಸಿಫ್‌ ಶಂಷುದ್ದೀನ್‌ ಮತ್ತು ಕಿರಣ್‌ ಗುಲಾಮ್‌ ಆಲಿ ಅವರನ್ನು ಮೇ 5ರೊಳಗೆ ಪಾಕಿಸ್ತಾನಕ್ಕೆ ಗಡಿಪಾರು ಮಾಡಲೇಬೇಕು,’ ಎಂದು ಹೈಕೋರ್ಟ್‌ ಶುಕ್ರವಾರ ಮಹತ್ವದ ಆದೇಶ ನೀಡಿದೆ.

ಶಿಕ್ಷೆ ಅವಧಿ ಕಡಿತಗೊಳಿಸುವಂತೆ ಕೋರಿ ಪಾಕ್‌ ಮೂಲದ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯಪೀಠ, ಶುಕ್ರವಾರ ಕೇಂದ್ರ ಗೃಹ ಸಚಿವಾಲಯ ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ ಓ) ಆದೇಶಿಸಿದೆ. ಅಲ್ಲದೇ, ದಂಪತಿಯನ್ನು ಗಡಿಪಾರು ಮಾಡಲು ಅಗತ್ಯವಿರುವ ಎಲ್ಲಾ ನೆರವು ನೀಡುವಂತೆ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿತು.

ಇದೇ ವೇಳೆ ದಂಪತಿಗೆ ನಗರದ ಎರಡು ಅಧೀನ ನ್ಯಾಯಾಲಯಗಳು ವಿಧಿಸಿದ್ದ ತಲಾ 21 ತಿಂಗಳ ಜೈಲು ಶಿಕ್ಷೆ ಏಕಕಾಲದಲ್ಲಿ ಜಾರಿಗೆ ತರುವಂತೆ ಮತ್ತು ಅಧೀನ ನ್ಯಾಯಾಲಯ ವಿಧಿಸಿದ್ದ ದಂಡದ ಮೊತ್ತವನ್ನು ಮನ್ನಾ ಮಾಡಿ ನ್ಯಾಯಪೀಠ ಆದೇಶಿಸಿತು. ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪಾಕಿಸ್ತಾನ ರಾಯಭಾರ ಕಚೇರಿ ಮೂಲಕ ದಂಪತಿಯನ್ನು ಮೇ 5ರೊಳಗೆ ಅವರ ದೇಶಕ್ಕೆ ಹಸ್ತಾಂತರ ಮಾಡುವಂತೆ ನ್ಯಾಯಪೀಠ ಆದೇಶದಲ್ಲಿ ತಿಳಿಸಿತು.

ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ, ದಂಪತಿ ತಾವು ಪಾಕಿಸ್ತಾನದ ಪ್ರಜೆಗಳು ಎಂದು ಹೇಳಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಪಾಕಿಸ್ತಾನ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಪರಿಶೀಲಿಸಿ ಅವರ ಪೌರತ್ವ ಮತ್ತು ರಾಷ್ಟ್ರೀಯತೆಯನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.

Advertisement

ಅದಕ್ಕಾಗಿ ದಂಪತಿ ಬಗ್ಗೆ ಮಾಹಿತಿಯನ್ನು ಪಾಕಿಸ್ತಾನ ರಾಯಭಾರ ಕಚೇರಿಗೆ ರವಾನಿಸಲಾಗಿದೆ. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಇದೊಂದು ಗಂಭೀರ ವಿಚಾರ ಆಗಿರುವುದರಿಂದ ಒಂದಿಷ್ಟು ಕಾಲಾವಕಾಶಬೇಕು ಎಂದು ನ್ಯಾಯಪೀಠವನ್ನು ಕೋರಿದರು.

24 ಗಂಟೆಯಲ್ಲಿ ವಾಘಾ ಗಡಿಗೆ ಬಿಟ್ಟು ಬನ್ನಿ: ಕೇಂದ್ರ ಸರ್ಕಾರದ ಪರ ವಕೀಲರ ವಾದಕ್ಕೆ ಕೋಪಗೊಂಡ ನ್ಯಾಯಪೀಠ, ಯಾವುದೇ ಕಾರಣಕ್ಕೂ ಸಮಯ ಕೊಡುವುದಿಲ್ಲ. ದಂಪತಿಗಳೇ ತಾವು ಪಾಕಿಸ್ತಾನದ ಪ್ರಜೆಗಳು ಎಂದು ಹೇಳಿಕೊಂಡಿರುವಾಗ ಪರಿಶೀಲನೆ ಎಲ್ಲಿಂದ ಬಂತು. ಅವರನ್ನು ನಮ್ಮ ದೇಶದಲ್ಲಿ ಇಟ್ಟುಕೊಂಡು ಕಾಲ ದೂಡುತ್ತಾ ಏಕೆ ಕೂತಿದ್ದೀರಿ.

ಅವರಿಗಾಗಿ ನಮ್ಮ ಜನರ ತೆರಿಗೆ ದುಡ್ಡು ಏಕೆ ಖರ್ಚು ಮಾಡಬೇಕು. ಅವರು ವೀಸಾ ಇಲ್ಲದೇ ಇಲ್ಲಿಗೆ ಬಂದಿದ್ದು ಹೇಗೆ, ಇಲ್ಲಿಯೇ ಅಕ್ರಮವಾಗಿ ನೆಲೆಸಿದ್ದು ಹೇಗೆ. ಇತರೆ ದೇಶದ ಕ್ರಿಮಿನಲ್‌ಗ‌ಳು ನಮ್ಮ ನೆಲದಲ್ಲಿ ವಾಸ ಮಾಡಲು ಯೋಗ್ಯರಲ್ಲ 24 ಗಂಟೆಯಲ್ಲಿ ಅವರನ್ನು ವಾಘಾ ಗಡಿಗೆ ಬಿಟ್ಟು ಬನ್ನಿ ಎಂದು ಕಟು ಮಾತಿನಲ್ಲಿ ಹೇಳಿತು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮನವಿ ಒಪ್ಪಿದ ನ್ಯಾಯಪೀಠ ಮೇ 5ರೊಳಗೆ ಗಡಿಪಾರು ಪ್ರಕ್ರಿಯೆ ಪೂರ್ಣಗೊಳಿಸುವಂತೆ ಗಡುವು ನೀಡಿತು.

ಈ ಮಧ್ಯೆ ದಂಪತಿ ಕುರಿತ ಸಂಪೂರ್ಣ ಮಾಹಿತಿ ಹಾಗೂ ಅವರ ಪಾಸ್‌ಪೋರ್ಟ್‌ಗಳನ್ನು ರಾಜ್ಯ ಪೊಲೀಸರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ಸರ್ಕಾರಿ ಪ್ಲೀಡರ್‌ ರಾಚಯ್ಯ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next