ನವದೆಹಲಿ: ಭ್ರಷ್ಟಾಚಾರ ಆರೋಪದಡಿ ಪಾಕಿಸ್ತಾನ ಮಾಜಿ ಪ್ರಧಾನಿ, ಪಿಟಿಐ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಬಂಧನಕ್ಕೊಳಗಾಗಿದ್ದ ಬೆನ್ನಲ್ಲೇ ಪಾಕಿಸ್ತಾನದಾದ್ಯಂತ ಖಾನ್ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಗಲಭೆ ಭುಗಿಲೆದ್ದಿದೆ. ಈ ಜಟಾಪಟಿಯ ನಡುವೆಯೇ ಪ್ರಧಾನಿ ಮೋದಿ ವಿರುದ್ಧ ದೂರು ನೀಡುವುದಾಗಿ ತಿಳಿಸಿರುವ ಪಾಕ್ ನಟಿಯೊಬ್ಬಳಿಗೆ ದೆಹಲಿ ಪೊಲೀಸರು ನೀಡಿದ ಖಡಕ್ ಉತ್ತರಕ್ಕೆ ನೆಟ್ಟಿಗರು ಗಹಗಹಿಸಿ ನಗುವಂತೆ ಮಾಡಿದೆ!
ಪಾಕಿಸ್ತಾನಿ ನಟಿ ಸೆಹಾರ್ ಶಿನ್ವಾರಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗುಪ್ತಚರ ಸಂಸ್ಥೆ ರಾ ವಿರುದ್ಧ ದೂರು ನೀಡುವುದಾಗಿ ಟ್ವೀಟ್ ಮಾಡಿದ್ದಳು.
ಶಿನ್ವಾರಿ ಟ್ವೀಟ್ ನಲ್ಲೇನಿತ್ತು?
ದೆಹಲಿ ಪೊಲೀಸರ ಆನ್ ಲೈನ್ ಲಿಂಕ್ ಯಾರಿಗಾದರೂ ತಿಳಿದಿದೆಯೇ? ನನ್ನ ದೇಶ ಪಾಕಿಸ್ತಾನದಲ್ಲಿ ಅರಾಜಕತೆ ಮತ್ತು ಭಯೋತ್ಪಾದನೆಯನ್ನು ಹುಟ್ಟುಹಾಕುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಗುಪ್ತಚರ ಸಂಸ್ಥೆ ರಾ ವಿರುದ್ಧ ನಾನು ದೂರು ನೀಡಬೇಕಾಗಿದೆ. ಭಾರತದ ನ್ಯಾಯಾಲಯಗಳು ಮುಕ್ತ ಸ್ವಾತಂತ್ರ್ಯ ಹೊಂದಿದ್ದರೆ, ನನಗೆ ಭಾರತದ ಸುಪ್ರೀಂಕೋರ್ಟ್ ನಲ್ಲಿ ನ್ಯಾಯ ಸಿಗುವುದು ಖಚಿತ” ಎಂದು ಉಲ್ಲೇಖಿಸಿದ್ದಳು.
ಪಾಕ್ ನಟಿ ಶಿನ್ವಾರಿ ಟ್ವೀಟ್ ಗೆ ದೆಹಲಿ ಪೊಲೀಸರು ನಗು ಭರಿಸುವ ಉತ್ತರ ನೀಡಿದ್ದು, ಅಂತರ್ಜಾಲ ತಾಣದಲ್ಲಿ ವೈರಲ್ ಆಗಿದೆ.
ಟ್ವೀಟ್ ಮೂಲಕ ದೆಹಲಿ ಪೊಲೀಸರ ತಿರುಗೇಟು:
“ನಾವು ಪಾಕಿಸ್ತಾನದಲ್ಲಿ ಈವರೆಗೂ ಯಾವುದೇ ಅಧಿಕಾರದ ವ್ಯಾಪ್ತಿಯನ್ನು ಹೊಂದಿಲ್ಲ ಎಂದು ಭಯಪಡುತ್ತಿದ್ದೇವೆ. ಆದರೆ ನಿಮ್ಮ ದೇಶದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ ಮೇಲೂ ನೀವು ಹೇಗೆ ಟ್ವೀಟ್ ಮಾಡುತ್ತಿದ್ದೀರಿ ಎಂದು ತಿಳಿಯಲು ಬಯಸುತ್ತೇವೆ ಎಂದು ತಿರುಗೇಟು” ನೀಡಿದೆ.
ದೆಹಲಿ ಪೊಲೀಸರ ಹಾಸ್ಯಪ್ರಜ್ಞೆಯ ಉತ್ತರಕ್ಕೆ ನೆಟಿಜನ್ ಗಳು ಶ್ಲಾಘಿಸಿದ್ದು, ಸೆಹಾರ್ ಶಿನ್ವಾರಿಗೆ ಚೆನ್ನಾಗಿ ತಿರುಗೇಟು ನೀಡಿದ್ದೀರಿ. ನಿನಗೆ ಕೆಟ್ಟ ದಿನ ಇದು…ನಮಗೆ ಮನರಂಜನೆಯಾಗಿದೆ ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.