ಗಯಾನ: ನಿಕೋಲಸ್ ಪೂರನ್ ಬ್ಯಾಟಿಂಗ್ ಸಾಹಸದ ಹೊರತಾಗಿಯೂ ಆರಂಭಿಕ ಆಟಗಾರರ ವೈಫಲ್ಯದ ಕಾರಣದಿಂದ ವೆಸ್ಟ್ ಇಂಡೀಸ್ ತಂಡ ಪಾಕಿಸ್ಥಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸೋಲನುಭವಿಸಿತು.
ಇಲ್ಲಿನ ಪ್ರೊವಿಡೆನ್ಸ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ ತಂಡ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ನಾಯಕ ಬಾಬರ್ ಅಜಮ್ 51 ರನ್ ಗಳಿಸಿದರೆ, ರಿಜ್ವಾನ್ 46 ರನ್ ಗಳಿಸಿದರು. ವಿಂಡೀಸ್ ಪರ ಜೇಸನ್ ಹೋಲ್ಡರ್ ಐದು ವಿಕೆಟ್, ಬ್ರಾವೋ ಎರಡು ವಿಕೆಟ್ ಕಿತ್ತರು.
ಇದನ್ನೂ ಓದಿ:ಗಾಯಗೊಂಡರೂ ಹೋರಾಡಿದ ಬಾಕ್ಸರ್ ಸತೀಶ್ ಕುಮಾರ್ ಗೆ ಸೋಲು
ಗುರಿ ಬೆನ್ನತ್ತಿದ ವಿಂಡೀಸ್ ಅಗ್ರ ಕ್ರಮಾಂಕದ ಆಟಗಾರರ ನಿಧಾನಗತಿಯ ಬ್ಯಾಟಿಂಗ್ ಮುಳುವಾಯಿತು. ಎವಿನ್ ಲಿವಿಸ್ 33 ಎಸೆತದಲ್ಲಿ 35 ರನ್, ಗೇಲ್ 20 ಎಸೆತದಲ್ಲಿ 16, ಹೆಟ್ಮೈರ್ 18 ಎಸೆತದಲ್ಲಿ 17 ರನ್ ಗಳಿಸಿದರು. 12 ಓವರ್ ಗಳಲ್ಲಿ 70 ರನ್ ಗಳಿಸಿದ್ದ ತಂಡವನ್ನು ಪೂರನ್ ಆಧರಿಸಿದರು. ಭರ್ಜರಿಯಾಗಿ ಬ್ಯಾಟ್ ಬೀಸಿದ ಪೂರನ್ ಕೇವಲ 33 ಎಸೆತದಲ್ಲಿ 62 ರನ್ ಗಳಿಸಿದರು. ಕೊನೆಯ ಆರು ಎಸೆತದಲ್ಲಿ ಗೆಲುವಿಗೆ 20 ರನ್ ಅಗತ್ಯವಿತ್ತು. ಆದರೆ 12 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. 20 ಓವರ್ ನಲ್ಲಿ 150 ರನ್ ಗಳಿಸಿದ ವಿಂಡೀಸ್ 7 ರನ್ ಅಂತರದಿಂದ ಸೋಲನುಭವಿಸಿತು.
ಪಾಕ್ ಪರ ಹಫೀಜ್ ನಾಲ್ಕು ಓವರ್ ನಲ್ಲಿ ಕೇವಲ ಆರು ರನ್ ನೀಡಿ 1 ವಿಕೆಟ್ ಕಬಳಿಸಿದರು. ಉಳಿದಂತೆ ಶಹೀನ್ ಅಫ್ರೀದಿ, ಹಸನ್ ಅಲಿ, ಮೊಹಮ್ಮದ್ ವಾಸಿಮ್ ತಲಾ ಒಂದು ವಿಕೆಟ್ ಪಡೆದರು.