ಕರಾಚಿ: ಕರಾಚಿ ಟೆಸ್ಟ್ ಪಂದ್ಯದಲ್ಲಿ ತಿರುಗಿ ಬಿದ್ದ ನ್ಯೂಜಿಲ್ಯಾಂಡ್ ನೋಲಾಸ್ ಉತ್ತರದ ಮೂಲಕ ದ್ವಿತೀಯ ದಿನದಾಟದ ಗೌರವ ಸಂಪಾದಿಸಿದೆ. ಪಾಕಿಸ್ಥಾನ ತನ್ನ ಮೊದಲ ಸರದಿಯನ್ನು 438ಕ್ಕೆ ಕೊನೆಗೊಳಿಸಿದ್ದು, ಕಿವೀಸ್ ವಿಕೆಟ್ ನಷ್ಟವಿಲ್ಲದೆ 165 ರನ್ ಪೇರಿಸಿದೆ.
ಟಾಮ್ ಲ್ಯಾಥಂ 78 ಮತ್ತು ಡೇವನ್ ಕಾನ್ವೆ 82 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಾಕಿಸ್ಥಾನದ ಐವರು ಬೌಲರ್ 47 ಓವರ್ ಎಸೆದರೂ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾಗಿಲ್ಲ.
ದ್ವಿತೀಯ ದಿನದ ಆರಂಭದಿಂದಲೇ ನ್ಯೂಜಿಲ್ಯಾಂಡ್ ಬೌಲರ್ ಮೇಲುಗೈ ಸಾಧಿಸಿದರು. 161 ರನ್ ಮಾಡಿ ಕ್ರೀಸ್ ಆಕ್ರಮಿಸಿಕೊಂಡಿದ್ದ ಬಾಬರ್ ಆಜಂ ಅವರನ್ನು ಇದೇ ಮೊತ್ತಕ್ಕೆ ಉರುಳಿಸಿದ ಟಿಮ್ ಸೌಥಿ ಪಾಕಿಸ್ಥಾನಕ್ಕೆ ಮೊದಲ ಆಘಾತವಿಕ್ಕಿದರು. ಆದರೆ 3 ರನ್ ಮಾಡಿ ಆಡುತ್ತಿದ್ದ ಆಘಾ ಸಲ್ಮಾನ್ 103ರ ತನಕ ಬೆಳೆಯುವುದರೊಂದಿಗೆ ಪಾಕಿಸ್ಥಾನದ ಮೊತ್ತ ಬೆಳೆಯತೊಡಗಿತು.
ಏಕಾಂಗಿಯಾಗಿ ಬ್ಯಾಟ್ ಬೀಸತೊಡಗಿದ ಆಘಾ ಸಲ್ಮಾನ್ 155 ಎಸೆತ ಎದುರಿಸಿ 17 ಬೌಂಡರಿ ಬಾರಿಸಿದರು. 6ನೇ ಟೆಸ್ಟ್ ಆಡುತ್ತಿರುವ ಸಲ್ಮಾನ್ ಹೊಡೆದ ಮೊದಲ ಸೆಂಚುರಿ ಇದಾಗಿದೆ. ದ್ವಿತೀಯ ದಿನ ಒಟ್ಟುಗೂಡಿದ ಪಾಕಿಸ್ಥಾನದ 121 ರನ್ ಮೊತ್ತದಲ್ಲಿ ಸಲ್ಮಾನ್ ಪಾಲೇ 100 ರನ್ ಎಂಬುದು ಉಲ್ಲೇಖನೀಯ. ಅವರಿಗೆ ಬೆಂಬಲವಿತ್ತ ಕೊನೆಯ ನಾಲ್ವರು ಆಟಗಾರರ ಒಟ್ಟು ಗಳಿಕೆ ಬರೀ 16 ರನ್. ಇವರಲ್ಲಿ ಯಾರೂ ಎರಡಂಕೆಯ ಗಡಿ ತಲುಪಲಿಲ್ಲ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-438 (ಬಾಬರ್ ಆಜಂ 161, ಆಘಾ ಸಲ್ಮಾನ್ 103, ಸಫìರಾಜ್ ಅಹ್ಮದ್ 86, ಸೌಥಿ 69ಕ್ಕೆ 3, ಬ್ರೇಸ್‌ವೆಲ್ 72ಕ್ಕೆ 2, ಸೋಧಿ 87ಕ್ಕೆ 2, ಅಜಾಜ್ ಪಟೇಲ್ 112ಕ್ಕೆ 2). ನ್ಯೂಜಿಲ್ಯಾಂಡ್-ವಿಕೆಟ್ ನಷ್ಟವಿಲ್ಲದೆ 165 (ಕಾನ್ವೇ ಬ್ಯಾಟಿಂಗ್ 82, ಲ್ಯಾಥಂ ಬ್ಯಾಟಿಂಗ್ 78).