Advertisement

ಭಾರತಕ್ಕೆ ಇಂದು ಪಾಕಿಸ್ಥಾನ ಎದುರಾಳಿ 

06:05 AM Nov 11, 2018 | |

ಪ್ರೊವಿಡೆನ್ಸ್‌: ತನ್ನ “ಪವರ್‌ ಪ್ಯಾಕ್ಡ್’ ಪರಾಕ್ರಮದ ಮೂಲಕ ಅಪಾಯಕಾರಿ ನ್ಯೂಜಿಲ್ಯಾಂಡನ್ನು 34 ರನ್ನುಗಳಿಂದ ಕೆಡವಿದ ಭಾರತ, ರವಿವಾರದ ತನ್ನ 2ನೇ ಟಿ20 ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ.

Advertisement

ಕಿವೀಸ್‌ ಎದುರಿನ ಪರಾಕ್ರಮವೇ ಮುಂದುವರಿದರೆ ಪಾಕ್‌ ಪಡೆ ಭಾರತಕ್ಕೆ ಸುಲಭದ ತುತ್ತಾಗುವುದರಲ್ಲಿ ಅನುಮಾನವಿಲ್ಲ. ಶುಕ್ರವಾರದ ಆರಂಭದ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 52 ರನ್ನುಗಳಿಂದ ಸೋತ ಒತ್ತಡ ಕೂಡ ಪಾಕ್‌ ಮೇಲಿದೆ. ಮಿಥಾಲಿ ರಾಜ್‌ ಕ್ರೀಸ್‌ ಇಳಿಯದೆಯೇ ಭಾರತ ದೊಡ್ಡ ಮೊತ್ತ ಪೇರಿಸಿತ್ತು ಎಂಬುದನ್ನು ಮರೆಯುವಂತಿಲ್ಲ.

ಕಳೆದ ಸಲ ಸೋತಿದ್ದ ಭಾರತ!
2016ರ ತವರಿನ ವಿಶ್ವಕಪ್‌ನಲ್ಲಿ ಭಾರತದ ವನಿತೆಯರು ಪಾಕಿಸ್ಥಾನ ವಿರುದ್ಧ ಆಘಾತಕಾರಿ ಸೋಲಿಗೆ ತುತ್ತಾಗಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳುವ ಯೋಜನೆ ಕೂಡ ಕೌರ್‌ ಬಳಗದ ಮುಂದಿದೆ. ಅಂದು “ಫಿರೋಜ್‌ ಶಾ ಕೋಟ್ಲಾ’ ಪಂದ್ಯದಲ್ಲಿ ಪಾಕ್‌ ಡಿ-ಎಲ್‌ ನಿಯಮದಂತೆ 2 ರನ್‌ ಜಯ ಸಾಧಿಸಿತ್ತು. ಭಾರತ 7ಕ್ಕೆ 96 ರನ್‌ ಗಳಿಸಿದರೆ, ಮಳೆ ಬಂದು ಪಂದ್ಯ ನಿಂತಾಗ ಪಾಕಿಸ್ಥಾನ 16 ಓವರ್‌ಗಳಲ್ಲಿ 6 ವಿಕೆಟಿಗೆ 77 ರನ್‌ ಗಳಿಸಿತ್ತು.

ಆದರೆ ದಿಲ್ಲಿ ಸೋಲಿನ ಬಳಿಕ ಎಚ್ಚೆತ್ತುಕೊಂಡ ಭಾರತ, 2 ಏಶ್ಯ ಕಪ್‌ ಆವೃತ್ತಿಗಳಲ್ಲಿ ಪಾಕಿಸ್ಥಾನವನ್ನು 3 ಸಲ ಎದುರಿಸಿ ಎಲ್ಲದರಲ್ಲೂ ಜಯಭೇರಿ ಮೊಳಗಿಸಿತ್ತು. ರವಿವಾರವೂ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.

ಹರ್ಮನ್‌ಪ್ರೀತ್‌ ಮತ್ತು ಜೆಮಿಮಾ ಜಬರ್ದಸ್ತ್ ಬ್ಯಾಟಿಂಗ್‌ ಮೂಲಕ ಕಿವೀಸ್‌ ರೆಕ್ಕೆ ಕತ್ತರಿಸುವಲ್ಲಿ ಭಾರತ ಯಶಸ್ವಿಯಾಗಿತ್ತು. ಆದರೆ ಅಲ್ಲಿ ವಿಫ‌ಲರಾದ ಅಗ್ರ ಕ್ರಮಾಂಕದ ಆಟಗಾರ್ತಿಯರು ಪಾಕ್‌ ವಿರುದ್ಧ ತಮ್ಮ ಫಾರ್ಮ್ ಪ್ರದರ್ಶಿಸಬೇಕಾದ ಅಗತ್ಯವಿದೆ.

Advertisement

ಸ್ಪಿನ್‌ ಮ್ಯಾಜಿಕ್‌ ನಿರೀಕ್ಷೆ
ಪ್ರೊವಿಡೆನ್ಸ್‌ ಅಂಗಳ ಸ್ಪಿನ್‌ ಹಾಗೂ ನಿಧಾನ ಗತಿಯ ಬೌಲರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಹೀಗಾಗಿ ಆಫ್ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮ, ಡಿ. ಹೇಮಲತಾ, ಲೆಗ್‌ಸ್ಪಿನ್ನರ್‌ ಪೂನಂ ಯಾದವ್‌, ಎಡಗೈ ಸ್ಪಿನರ್‌ ರಾಧಾ ಯಾದವ್‌ ಅವರ ಮ್ಯಾಜಿಕ್‌ ಮತ್ತೂಮ್ಮೆ ನಡೆಯಬಹುದು. ಕಿವೀಸ್‌ ವಿರುದ್ಧ ಬಿದ್ದ 9 ವಿಕೆಟ್‌ಗಳಲ್ಲಿ ಎಂಟನ್ನು ಸ್ಪಿನ್ನರ್‌ಗಳೇ ಬುಟ್ಟಿಗೆ ಹಾಕಿಕೊಂಡಿದ್ದರು. ಆದರೆ ಪಾಕಿಸ್ಥಾನ ಸ್ಪಿನ್‌ ನಿಭಾವಣೆಯಲ್ಲಿ ಹೆಚ್ಚಿನ ಪರಿಣತಿ ಹೊಂದಿರುವುದರಿಂದ ಹೆಚ್ಚುವರಿ ಸೀಮರ್‌ ಮಾನ್ಸಿ ಜೋಶಿ ಅಥವಾ ಪೂಜಾ ವಸ್ತ್ರಾಕರ್‌ ಅವಕಾಶ ಪಡೆಯಲೂಬಹುದು.

ಪಾಕಿಸ್ಥಾನ ತಂಡದಲ್ಲೂ ಕೆಲವು ಮಂದಿ ಅಪಾಯಕಾರಿ ಕ್ರಿಕೆಟಿಗರಿದ್ದಾರೆ. ನಾಯಕಿ ಜವೇರಿಯಾ ಖಾನ್‌, ಹಿರಿಯ ಸ್ಪಿನ್ನರ್‌ ಸನಾ ಮಿರ್‌, ಆಲ್‌ರೌಂಡರ್‌ ಬಿಸ್ಮಾ ಮರೂಫ್ ಬಗ್ಗೆ ಭಾರತ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಇಂದಿನ ಪಂದ್ಯಗಳು
1. ಭಾರತ-ಪಾಕಿಸ್ಥಾನ
ಆರಂಭ: ರಾತ್ರಿ 8.30
2. ಆಸ್ಟ್ರೇಲಿಯ -ಅಯರ್‌ಲ್ಯಾಂಡ್‌
ಆರಂಭ: ನಡುರಾತ್ರಿ ಬಳಿಕ 1.30

Advertisement

Udayavani is now on Telegram. Click here to join our channel and stay updated with the latest news.

Next