ಲಾಹೋರ್ : ಇದೇ ಜೂನ್ 13 ಮತ್ತು 14ರಂದು ಕಿರ್ಗಿಸ್ಥಾನದ ಬಿಷ್‌ಕೆಕ್ ನಲ್ಲಿ ನಡೆಯುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಓ) ಶೃಂಗದಲ್ಲಿ ಭಾಗವಹಿಸುವ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನಕ್ಕೆ ತನ್ನ ವಾಯು ಪ್ರದೇಶದಲ್ಲಿ ಹಾರಲು ಪಾಕಿಸ್ಥಾನ ಸರಕಾರ ರಿಯಾಯಿತಿಯ ರೂಪದಲ್ಲಿ ತಾತ್ವಿಕವಾಗಿ ಅನುಮತಿ ನೀಡಿದೆ.
ಇದೇ ಶೃಂಗ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾಗವಹಿಸಲಿದ್ದಾರೆ.
ಭಾರತೀಯ ವಾಯು ಪಡೆ ಬಾಲಾಕೋಟ್ ನಲ್ಲಿನ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿದ ತರುವಾಯ ಕಳೆದ ಫೆ.26ರಿಂದ ಪಾಕಿಸ್ಥಾನ ತನ್ನ ವಾಯು ಪ್ರದೇಶವನ್ನು ಪೂರ್ತಿಯಾಗಿ ಮುಚ್ಚಿದೆ.
ಆ ಬಳಿಕ ಪಾಕಿಸ್ಥಾನ ತನ್ನ 11 ವಾಯು ಮಾರ್ಗಗಳಲ್ಲಿ ಕೇವಲ ಎರಡನ್ನು ಮಾತ್ರವೇ ತೆರೆದಿದ್ದು ಅವು ದಕ್ಷಿಣ ಪಾಕಿಸ್ಥಾನವಾಗಿ ಸಾಗುವ ವಾಯು ಮಾರ್ಗವಾಗಿವೆ.
ಬಿಷ್‌ಕೆಕ್ ನಲ್ಲಿನ ಎಸ್‌ಸಿಓ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ಮೋದಿ ಅವರ ವಿಮಾನಕ್ಕೆ ಪಾಕ್ ವಾಯು ಮಾರ್ಗವಾಗಿ ಹಾರಲು ಅನುಮತಿ ನೀಡಬೇಕೆಂದು ಭಾರತ ಇಮ್ರಾನ್ ಖಾನ್ ಸರಕಾರವನ್ನು ಕೇಳಿಕೊಂಡಿತ್ತು. ಆ ಪ್ರಕಾರ ಪಾಕ್ ಸರಕಾರ ಭಾರತಕ್ಕೆ ತಾತ್ವಿಕ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.