ವಾಷಿಂಗ್ಟನ್ : ಪಾಕಿಸ್ಥಾನ ತನ್ನ ನೆಲದಲ್ಲಿನ ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕುವ ಕೆಲಸ ಮಾಡಿ ತೋರಿಸುವುದನ್ನು ಅಮೆರಿಕ ಕಾತರದಿಂದ ಎದುರುನೋಡುತ್ತಿದೆ ಎಂಬ ಖಡಕ್ ಸಂದೇಶವನ್ನು ಟ್ರಂಪ್ ಆಡಳಿತೆ ಇಸ್ಲಾಮಾಬಾದ್ ಗೆ ರವಾನಿಸಿದೆ.
ತನ್ನ ದೇಶದಲ್ಲಿ ಕಾರ್ಯಾಚರಿಸತ್ತಿರುವ ಉಗ್ರರನ್ನು, ವಿಶೇಷವಾಗಿ ಹಕಾನಿ ಜಾಲವನ್ನು, ಪಾಕಿಸ್ಥಾನ ಸಂಪೂರ್ಣವಾಗಿ ನಿರ್ನಾಮ ಮಾಡಬೇಕು ಎಂದು ಹೇಳಿರುವ ಅಮೆರಿಕ, ಉಗ್ರ ನಿಗ್ರಹದಲ್ಲಿ ಪಾಕಿಸ್ಥಾನಕ್ಕೆ ವಾಷಿಂಗ್ಟನ್ ಮಹತ್ವ ನೀಡುತ್ತದೆ ಎಂಬುದನ್ನು ಪುನರಚ್ಚರಿಸಿದೆ.
ಇದೇ ವೇಳೆ ಪಾಕಿಸ್ಥಾನ ತಾನು ಈಗಲೂ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಮುಂದುವರಿಸುತ್ತಿದ್ದೇನೆ; ಆದರೆ ಅದರಿಂದ ಪ್ರಜೆಗಳಿಗೆ ಮತ್ತು ಸರಕಾರಕ್ಕೆ ಆಗುವ ಹಾನಿಯ ಬಗ್ಗೆ ಕೂಡ ತಾನು ಜಾಗೃತೆ ವಹಿಸುತ್ತಿದ್ದೇನೆ ಎಂದು ಹೇಳಿದೆ.
ಹಾಗಿದ್ದರೂ “ಉಗ್ರ ನಿಗ್ರಹ ವಿಚಾರದಲ್ಲಿ ಪಾಕಿಸ್ಥಾನ ನಮ್ಮ ನಿಕಟ ವಿಚಕ್ಷಣೆಯಲ್ಲಿ ಇದೆ’ ಎಂದು ಅಮೆರಿಕದ ದಕ್ಷಿಣ ಮತ್ತು ಮಧ್ಯ ಏಶ್ಯ ವ್ಯವಹಾರಗಳ ಸಹಾಯಕ ಸಚಿವೆ ಅಲೈಸ್ ಜಿ ವೆಲ್ಸ್ ಹೇಳಿರುವುದು ಪಾಕಿಸ್ಥಾನಕ್ಕೆ ಎಚ್ಚರಿಕೆಯ ರೂಪದಲ್ಲಿ ನೀಡಲಾಗಿರುವ ಸಂದೇಶ ಎಂದು ಹೇಳಲಾಗಿದೆ.
“ಪಾಕಿಸ್ಥಾನ ನಮ್ಮ ನಿಕಟ ವಿಚಕ್ಷಣೆಯಲ್ಲಿದೆ; ಅಫ್ಘಾನಿಸ್ಥಾನದಲ್ಲಿ 2001ರಲ್ಲಿ ನಿರ್ನಾಮಗೊಂಡ ಬಳಿಕ ಪಾಕಿಗೆ ಪಲಾಯನ ಮಾಡಿ ಸುರಕ್ಷಿತ ತಾಣಗಳನ್ನು ಸ್ಥಾಪಿಸಿಕೊಂಡಿರುವ ತಾಲಿಬಾನ್ ಉಗ್ರರನ್ನು ಸಂಪೂರ್ಣವಾಗಿ ಮಟ್ಟ ಹಾಕುವ ದಿಶೆಯಲ್ಲಿ ನಾವು ಪಾಕಿಸ್ಥಾನದ ಪ್ರಶ್ನಾತೀತ ಸಹಕಾರವನ್ನು ನಿರೀಕ್ಷಿಸುತ್ತೇವೆ’ ಎಂದು ಅಲೈಸ್ ವೆಲ್ಸ್ ಹೇಳಿದ್ದಾರೆ.