ಇಸ್ಲಾಮಾಬಾದ್: ‘ತಾಲಿಬಾನ್‌ನ ಗಾಡ್‌ಫಾದರ್’ ಎಂದೇ ಕರೆಯಲ್ಪಡುತ್ತಿದ್ದ ಪಾಕಿಸ್ಥಾನದ ಇಸ್ಲಾಂ ಧಾರ್ಮಿಕ ವಿದ್ವಾಂಸ ಹಾಗೂ ಮಾಜಿ ಸಂಸದ ಮೌಲಾನಾ ಸಮೀವುಲ್ ಹಕ್‌ನನ್ನು ಅಜ್ಞಾತ ವ್ಯಕ್ತಿಗಳು ರಾವಲ್ಪಿಂಡಿಯಲ್ಲಿ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಜಮೀಯತ್ ಉಲೆಮಾ ಇಸ್ಲಾಂ-ಶಮಿ (ಜೆಯುಐ-ಎಸ್) ಎಂಬ ಸಂಘಟನೆಯ ಮುಖ್ಯಸ್ಥನೂ ಆಗಿದ್ದ ಸಮೀವುಲ್ ತನ್ನ ಖಾಸಗಿ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಾರಿನ ಮೇಲೆ ಗುಂಡಿನ ಮಳೆಗರೆದು ಪರಾರಿಯಾಗಿದ್ದಾರೆ. ಮಾರಣಾಂತಿಕವಾಗಿ ಗಾಯಗೊಂಡಿದ್ದ ಸಮೀವುಲ್, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆೆ. ಘಟನೆಯಲ್ಲಿ ಸಮೀವುಲ್ ಅಂಗರಕ್ಷಕ, ಚಾಲಕ ಸಹ ಗಾಯಗೊಂಡಿದ್ದಾನೆ. 1985ರಿಂದ 1991 ಹಾಗೂ 1991ರಿಂದ 1997ರವರೆಗೆ ಎರಡು ಬಾರಿ ಈತ ಸಂಸದನಾಗಿದ್ದ. ಧರ್ಮನಿಂದನೆ ಪ್ರಕರಣದಲ್ಲಿ ಮಹಿಳೆಯನ್ನು ಬಿಡುಗಡೆ ಮಾಡಿದ್ದನ್ನು ಖಂಡಿಸಿ ಹಕ್ ಗುರುವಾರವಷ್ಟೇ ಹೇಳಿಕೆ ನೀಡಿದ್ದ.