ಇಸ್ಲಾಮಾಬಾದ್: ಪುನರ್ ನವೀಕರಣಗೊಳ್ಳುತ್ತಿದ್ದ ಸುಮಾರು ನೂರು ವರ್ಷದಷ್ಟು ಹಳೆಯ ಹಿಂದೂ ದೇವಾಲಯದ ಮೇಲೆ ಅಪರಿಚಿತ ಜನರ ಗುಂಪು ದಾಳಿ ನಡೆಸಿರುವ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯ ಗ್ಯಾರಿಸನ್ ಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಡಿಕೆಶಿಯಿಂದ ನಮ್ಮ ಮಗಳು ದುಡ್ಡು ಪಡೆದಿದ್ದಾಳೆ : ಸಿಡಿ ಯುವತಿ ಪೋಷಕರು
ರಾವಲ್ಪಿಂಡಿ ನಗರದಲ್ಲಿರುವ ಪುರಾನಾ ಖ್ವಿಲಾ ಎಂಬಲ್ಲಿ ಶನಿವಾರ (ಮಾರ್ಚ್ 27) ಪುರಾತನ ಹಿಂದೂ ದೇವಾಲಯದ ಮುಖ್ಯದ್ವಾರ ಹಾಗೂ ಮೇಲಂತಸ್ತಿನಲ್ಲಿರುವ ಬಾಗಿಲನ್ನು 10ರಿಂದ 15 ಜನರಿದ್ದ ಗುಂಪು ಧ್ವಂಸಗೊಳಿಸಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಕಳೆದ ಒಂದು ತಿಂಗಳಿನಿಂದ ಪುರಾತನ ಹಿಂದೂ ದೇವಾಲಯದ ಪುನರ್ ನವೀಕರಣ ಕೆಲಸ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಭಾಗಶಃ ಹಾನಿಗೊಳಿಸಿರುವುದಾಗಿ ಉತ್ತರ ವಲಯದ ಭದ್ರತಾ ಅಧಿಕಾರಿ ಸೈಯದ್ ಅಬ್ಬಾಸ್ ಝೈದಿ ತಿಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ರಾವಲ್ಪಿಂಡಿಯ ಬನ್ನಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಮೊದಲು ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಭೂ ಮಾಫಿಯಾದವರು ಅಕ್ರಮವಾಗಿ ವಶಪಡಿಸಿಕೊಂಡು ಅಂಗಡಿ, ಮುಂಗಟ್ಟುಗಳನ್ನು ನಡೆಸುತ್ತಿದ್ದರು. ಇತ್ತೀಚೆಗಷ್ಟೇ ಜಿಲ್ಲಾಡಳಿತ ಅಕ್ರಮವಾಗಿದ್ದ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಿತ್ತು. ನಂತರ ದೇವಾಲಯದ ಪುನರ್ ನವೀಕರಣ ಕಾರ್ಯ ಆರಂಭಿಸಲಾಗಿತ್ತು ಎಂದು ವರದಿ ತಿಳಿಸಿದೆ.