ಹೊಸದಿಲ್ಲಿ, /ಜಮ್ಮು: ‘ಹಲೋ, ನಾನೊಬ್ಬ ಐಎಸ್‌ಐ ಏಜೆಂಟ್. ಆದರೆ, ನಾನು ಪಾಕ್ ಗುಪ್ತಚರ ಸಂಸ್ಥೆಯ ಏಜೆಂಟ್ ಆಗಿ ಮುಂದುವರಿಯಲು ಬಯಸುಧಿವುದಿಲ್ಲ. ನಾನು ಭಾರತದಲ್ಲೇ ಇರಲು ಇಷ್ಟಪಡುತ್ತೇನೆ.’ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಹೊಸದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವ್ಯಕ್ತಿಯೊಬ್ಬ ಹೀಗೆ ಹೇಳುತ್ತಿದ್ದರೆ, ಅಲ್ಲಿ ನೆರೆದಿದ್ದ ಎಲ್ಲರೂ ಒಂದು ಕ್ಷಣ ಅವಕ್ಕಾಗಿ ನಿಂತಿದ್ದರು. ಹೌದು, ಶುಕ್ರವಾರ ದಿಲ್ಲಿಯ ಏರ್‌ಪೋರ್ಟ್‌ನಲ್ಲಿ ನಡೆದ ಘಟನೆಯಿದು. ಪಾಕಿಸ್ಥಾನಕ್ಕೆ ಅತಿದೊಡ್ಡ ಮುಜುಗರ ಎಂಬಂತೆ ಐಎಸ್‌ಐ ಏಜೆಂಟ್‌ವೊಬ್ಬ ಭಾರತಕ್ಕೆ ಬಂದು ಶರಣಾಗಿದ್ದಾನೆ. ಇಂತಹುದೊಂದು ಘಟನೆ ಇದೇ ಮೊದಲು ಎನ್ನಲಾಗಿದೆ.
ಪಾಕಿಸ್ಥಾನಿ ಪಾಸ್‌ಪೋರ್ಟ್ ಹೊಂದಿರುವ ಮುಹಮ್ಮದ್ ಅಹ್ಮದ್ ಶೇಖ್ ಮುಹಮ್ಮದ್ ರಫೀಕ್ ಎಂಬಾತನೇ ಶರಣಾದ ವ್ಯಕ್ತಿ. ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ನೇರವಾಗಿ ಹೆಲ್ಪ್ ಡೆಸ್ಕ್ ಬಳಿ ಬಂದ ರಫೀಕ್, ಅಲ್ಲಿದ್ದ ಮಹಿಳಾ ಸಿಬಂದಿಗೆ ತನ್ನ ವಿಚಾರವನ್ನು ಹೇಳಿಕೊಂಡಿದ್ದಾನೆ. ನಾನು ಐಎಸ್‌ಐ ಕುರಿತ ಕೆಲವು ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ ಎಂದಿದ್ದಾನೆ. ಕೂಡಲೇ ಆಕೆ, ಅಲ್ಲಿದ್ದ ಭದ್ರತಾ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಅವರು ಬಂದು ರಫೀಕ್‌ನನ್ನು ವಶಕ್ಕೆ ಪಡೆದು, ಕೇಂದ್ರ ಗುಪ್ತಚರ ಸಂಸ್ಥೆಗೆ ಮಾಹಿತಿ ರವಾನಿಸಿದ್ದಾರೆ.
ಕಾಠ್ಮಂಡುಗೆ ಹೋಗಬೇಕಿತ್ತು: 38 ವರ್ಷದ ರಫೀಕ್, ದುಬೈನಿಂದ ಭಾರತಕ್ಕೆ, ನಂತರ ಕಾಠ್ಮಂಡುವಿಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಆತ ತನ್ನ ಪಯಣ ಮುಂದುವರಿಸದೇ ಶರಣಾಗಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಗುಪ್ತಚರ ತಂಡವು, ನಿಗೂಢ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ಆರಂಭಿಸಿದೆ. ರಫೀಕ್ ಹೇಳುತ್ತಿರುವುದು ನಿಜವೇ, ಸುಳ್ಳೇ ಎಂಬುದನ್ನು ದೃಢಪಡಿಸಿಕೊಳ್ಳಬೇಕಿದೆ. ಐಎಸ್‌ಐ ಸ್ಟಾಂಪ್ ಇರುವ ದಾಖಲೆಪತ್ರಗಳೂ ಆತನೊಂದಿಗಿದ್ದು, ಅದನ್ನು ಅಧಿಕಾರಿಗಳು ಪರಿಶೀಲನೆಗೊಳಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅನಂತ್‌ನಾಗ್‌ನಲ್ಲಿ ಉಗ್ರನ ಸೆರೆ
ಕುಪ್ವಾರಾ ದಾಳಿಯ ಬೆನ್ನಲ್ಲೇ ಶುಕ್ರವಾರ ಜಮ್ಮು- ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಮತ್ತೆ ಉಗ್ರರು ಮತ್ತು ಸಿಆರ್‌ಪಿಎಫ್ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ, ಉಗ್ರನೊಬ್ಬನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಭದ್ರತಾಪಡೆಗಳು ಯಶಸ್ವಿಯಾಗಿವೆ. ಉಗ್ರರು ಹಾರಿಸಿದ ಗುಂಡಿಗೆ ಸಿಆರ್‌ಪಿಎಫ್ನ ಒಬ್ಬ ಯೋಧ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ, ಸೆರೆ ಸಿಕ್ಕ ಉಗ್ರನು ಯೋಧರ ಕೈಯಿಂದ ರೈಫಲ್ ಕಿತ್ತುಕೊಳ್ಳಲು ವಿಫಲ ಯತ್ನ ನಡೆಸಿದ ಎಂದೂ ರಕ್ಷಣಾ ಮೂಲಗಳು ತಿಳಿಸಿವೆ.
ಉರಿ, ಕುಪ್ವಾರಾ ಸೇನಾನೆಲೆಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಕಲ್ಲುತೂರಾಟವನ್ನು ಸರಕಾರವು ಯುದ್ಧ ಎಂದು ಪರಿಗಣಿಸಿ, ಕಣಿವೆ ರಾಜ್ಯದಲ್ಲಿ ಕಾರ್ಪೆಟ್ ಬಾಂಬ್(ಭಾರೀ ಹಾನಿ ಉಂಟುಮಾಡುವ ವೈಮಾನಿಕ ದಾಳಿ) ಹಾಕಬೇಕಿದೆ.
– ಪ್ರವೀಣ್ ತೊಗಾಡಿಯಾ, ವಿಶ್ವ ಹಿಂದೂ ಪರಿಷತ್ ನಾಯಕ