ಇಸ್ಲಮಾಬಾದ್: ಏಷ್ಯಾಕಪ್ ಕೂಟಕ್ಕೆ ಸಜ್ಜಾಗುತ್ತಿರುವ ಪಾಕಿಸ್ತಾನ ತಂಡವು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿದೆ. ಅಫ್ಘಾನ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ ಸಂಭ್ರಮದ ನಡುವೆ ಏಷ್ಯಾ ಕಪ್ ತಂಡದಲ್ಲಿ ಬದಲಾವಣೆ ಮಾಡಿದೆ.
ಪಾಕಿಸ್ತಾನ ಈ ಹಿಂದೆ ಏಷ್ಯಾಕಪ್ ಗಾಗಿ 17 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಇದೀಗ ಏಷ್ಯಾ ಕಪ್ ತಂಡದಲ್ಲಿರದ ಕೇವಲ ಅಫ್ಘಾನ್ ಸರಣಿಯ ಭಾಗವಾಗಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ ಸೌದ್ ಶಕೀಲ್ ಅವರನ್ನು ಇದೀಗ ಮುಖ್ಯ ಕೂಟಕ್ಕೆ ಸೇರಿಸಿಕೊಳ್ಳಲಾಗಿದೆ.
ಅಫ್ಘಾನ್ ಸರಣಿಯಲ್ಲಿ ಸೌದ್ ಶಕೀಲ್ ಅವರು ಕೊನೆಯ ಒಂದು ಪಂದ್ಯ ಮಾತ್ರ ಆಡಿದ್ದರು. ಅದರಲ್ಲಿ ಅವರು 8 ಎಸೆತಗಳಲ್ಲಿ 9 ರನ್ ಗಳಿಸಿದ್ದರು. 2022ರ ಮಾರ್ಚ್ ಬಳಿಕ ಮೊದಲ ಬಾರಿಗೆ ಅವರು ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದರು. ಇದೀಗ ಅಚ್ಚರಿಯೆಂಬಂತೆ ಏಷ್ಯಾಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:Soujanya ತಾಯಿ ಮುಂದೆ ಅಣ್ಣಪ್ಪ ಬೆಟ್ಟದಲ್ಲಿ ಪ್ರಮಾಣ ಮಾಡಿದ ಧೀರಜ್, ಮಲ್ಲಿಕ್, ಉದಯ್ ಜೈನ್
ಇದರ ನಡುವೆ, ಪಾಕಿಸ್ತಾನದ ಇನ್ನೂ ಏಕದಿನ ಪಂದ್ಯವಾಡದ, ಆರಂಭಿಕ 17 ಸದಸ್ಯರ ತಂಡದ ಭಾಗವಾಗುದ್ದ ಬಲಗೈ ಬ್ಯಾಟರ್ ತಯ್ಯಬ್ ತಾಹಿರ್ ಅವರನ್ನು ಈಗ ಪ್ರಯಾಣ ಮೀಸಲು ಎಂದು ವರ್ಗಾಯಿಸಲಾಗಿದೆ. ತಾಹಿರ್ ಟಿ20 ಮಾದರಿಯಲ್ಲಿ ಪಾಕಿಸ್ತಾನ ಪರವಾಗಿ ಕೇವಲ ಮೂರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಪಾಕಿಸ್ತಾನ ತಂಡ: ಬಾಬರ್ ಆಜಮ್ (ನಾ), ಅಬ್ದುಲ್ಲಾ ಶಫೀಖ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತೀಕರ್ ಅಹಮದ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಫಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಅಫ್ರಿದಿ, ಸೌದ್ ಶಕೀಲ್, ತಯ್ಯಬ್ ತಾಹಿರ್ (ಪ್ರಯಾಣ ಮೀಸಲು).