Advertisement

ಬಯಲಾಯ್ತು ಪಾಕ್‌ ಕುತಂತ್ರ ತಕ್ಕ ಪ್ರತ್ಯುತ್ತರ ಅಗತ್ಯ

01:11 AM Sep 19, 2020 | Hari Prasad |

ಸೆಪ್ಟೆಂಬರ್‌ 19ರಿಂದ ಪಾಕಿಸ್ಥಾನವು ಕಾಶ್ಮೀರದ ವಿಚಾರದಲ್ಲಿ ಭಾರತ ವಿರೋಧಿ ಅಪಪ್ರಚಾರವನ್ನು ಹೆಚ್ಚಿಸಲು ಸಜ್ಜಾಗಿದೆ ಎನ್ನುವ ರಹಸ್ಯ ಬಯಲಾಗಿದೆ.

Advertisement

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವನ್ನು ಗಮನದಲ್ಲಿಟ್ಟುಕೊಂಡು ಇಮ್ರಾನ್‌ ಸರಕಾರ ಹಾಗೂ ಐಎಸ್‌ಐ ಈ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಹೇಳುತ್ತಿದೆ. ಹಾಗೆಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ಥಾನ ಭಾರತ ವಿರೋಧಿ ಕಟ್ಟುಕಥೆಗಳನ್ನು ಬಿತ್ತಲು ಪ್ರಯತ್ನಿಸುತ್ತಿರುವುದು ಇದೇ ಮೊದಲೇನೂ ಅಲ್ಲ.

ಆದರೆ ಅದು ಈ ಬಾರಿ ಸಾಮಾಜಿಕ ಮಾಧ್ಯಮಗಳನ್ನೇ ಹೆಚ್ಚಾಗಿ ತನ್ನ ಕುತಂತ್ರಕ್ಕೆ ಬಳಸಿಕೊಳ್ಳಲು ಸಿದ್ಧವಾಗಿದ್ದು, ಇಂದಿನಿಂದ ಜಗತ್ತಿನಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ ‘ಕಾಶ್ಮೀರಕ್ಕೆ ಬೇಕು ಸ್ವಾತಂತ್ರ್ಯ’ ಎಂಬ ಹ್ಯಾಶ್‌ಟ್ಯಾಗ್‌ ಬಳಸಿ ಅಪಪ್ರಚಾರ ನಡೆಸಲು ಸಜ್ಜಾಗಿದೆ ಎನ್ನುತ್ತವೆ ಗುಪ್ತಚರ ಮಾಹಿತಿಗಳು.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಅಮೆರಿಕ, ಕೆನಡಾ, ಬ್ರಿಟನ್‌, ಮಲೇಷ್ಯಾ, ಸೌದಿ, ಕುವೈಟ್‌, ಕತಾರ್‌ ಸೇರಿದಂತೆ ಅನೇಕ ರಾಷ್ಟ್ರಗಳ ಸಾಮಾಜಿಕ ಮಾಧ್ಯಮಗಳಲ್ಲಿ ಭಾರತ ವಿರೋಧಿ ಸಂದೇಶಗಳನ್ನು ಟ್ರೆಂಡ್‌ ಮಾಡಲು ಪಾಕ್‌ ಪರ ಲಾಬಿಗಳು ಸಿದ್ಧವಾಗಿವೆಯಂತೆ.

ಕಾಶ್ಮೀರದ ವಿಚಾರದಲ್ಲಿ ಪಾಕ್‌ನ ಕಟ್ಟುಕತೆಗಳನ್ನು ಈಗ ಯಾರೂ ನಂಬುವುದಿಲ್ಲ ಎನ್ನುವುದು ಸತ್ಯ.  ಇಂಥ ಪ್ರಯತ್ನಗಳಲ್ಲೆಲ್ಲ ಪಾಕ್‌ ವಿಫ‌ಲವಾಗುತ್ತಲೇ ಬರುತ್ತದಾದರೂ, ಕೆಲ ವರ್ಷಗಳಿಂದ ವಿಶ್ವಾದ್ಯಂತ ಪಾಕ್‌ ಪರ ಲಾಬಿಗಳು ಹೆಚ್ಚು ತಲೆಯೆತ್ತಲಾರಂಭಿಸಿವೆ. ಇದಕ್ಕೆ ಚೀನದ ಕುಮ್ಮಕ್ಕು ಅಥವಾ ತಂತ್ರಗಾರಿಕೆಯೂ ಬೆನ್ನೆಲುಬಾಗಿದೆ ಎನ್ನಲಾಗುತ್ತದೆ.

Advertisement

ಈಗ ನಡೆಯುತ್ತಿರುವ ಅಮೆರಿಕದ ಚುನಾವಣೆಯಲ್ಲಿಯೂ ಅನೇಕ ಪಾಕ್‌ ಪರ ಲಾಬಿಗಳು ಕೆಲಸ ಮಾಡುತ್ತಿವೆ. ಈ ಹಿಂದೆ ಡೆಮಾಕ್ರಾಟ್‌ ಪಕ್ಷದ ಕಮಲಾ ಹ್ಯಾರಿಸ್‌ ಕೂಡ ಇಂಥ ಲಾಬಿಗಳ ಜತೆ ಕೈಜೋಡಿಸಿ, ಕಾಶ್ಮೀರದ ವಿಚಾರದಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಬಹುದು.

ಕೋವಿಡ್‌ ಸಂಕಷ್ಟದ ನಡುವೆಯೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನ ಸೆಪ್ಟೆಂಬರ್‌ 15ರಂದು ಆರಂಭಗೊಂಡಿದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು, ಮುಖ್ಯಸ್ಥರು ಸೆ. 22ರಂದು ಆರಂಭಗೊಳ್ಳಲಿರುವ ಚರ್ಚೆಗಳನ್ನು ಉದ್ದೇಶಿಸಿ ವರ್ಚುವಲ್‌ ಭಾಷಣಗಳನ್ನು ಮಾಡಲಿದ್ದಾರೆ.

ಪ್ರಧಾನಿ ಮೋದಿಯವರ ಭಾಷಣದ (ಸೆ.24) ಮರುದಿನ, ಅಂದರೆ ಸೆಪ್ಟಂಬರ್‌ 25ರಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ರ ಭಾಷಣವಿದ್ದು, ನಿಸ್ಸಂಶಯವಾಗಿಯೂ ಮತ್ತೆ ಅವರು ಕಾಶ್ಮೀರದ ವಿಚಾರವನ್ನೇ ಮಾತನಾಡಬಹುದು.

ಈ ಬಾರಿ ಭಾರತ ಪಾಕಿಸ್ಥಾನದ ಹೆಡೆಮುರಿ ಕಟ್ಟಲೇಬೇಕಿದೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಐಎಸ್‌ಐ ಹಾಗೂ ಪಾಕ್‌ ಸೇನೆಯಿಂದ ನಡೆಯುತ್ತಿರುವ ದೌರ್ಜನ್ಯಗಳು, ಬಲೂಚಿಸ್ಥಾನದ ಜನರ ವಿರುದ್ಧ ಇಮ್ರಾನ್‌ ಸರಕಾರ ನಡೆಸುತ್ತಿರುವ ದಬ್ಟಾಳಿಕೆಗಳು, ಪಾಕಿಸ್ಥಾನವು ದಾವೂದ್‌ ಇಬ್ರಾಹಿಂನಂಥ ಭೂಗತಪಾತಕಿಗಳಿಗೆ, ಲಷ್ಕರ್‌, ತಾಲಿಬಾನ್‌ನ ಉಗ್ರರಿಗೆ ನೆಲೆ ಒದಗಿಸುತ್ತಿರುವುದು, ಆಫ್ಘಾನಿಸ್ಥಾನ‌ದಲ್ಲಿ ಐಸಿಸ್‌ ಅನ್ನು ಬೆಳೆಸುತ್ತಿರುವುದು, ಚೀನದಲ್ಲಿ ಉಯ್ಘರ್‌ ಮುಸಲ್ಮಾನರ ವಿರುದ್ಧ ದೌರ್ಜನ್ಯ ನಡೆಯುತ್ತಿದ್ದರೂ ಇಮ್ರಾನ್‌ ಸುಮ್ಮನಿರುವುದು, ಭಾರತದೊಳಕ್ಕೆ ಉಗ್ರರನ್ನು ನುಸುಳಿಸಲು ಪ್ರಯತ್ನಿಸುತ್ತಿರುವುದು,…ಇಂಥ ವಿಷಯಗಳ ಮೇಲೆಲ್ಲ ಭಾರತ ಬಲವಾಗಿ ಬೆಳಕು ಚೆಲ್ಲಿ ಪಾಕಿಸ್ಥಾನ ಹಾಗೂ ಅದರ ಬೆನ್ನಿಗೆ ನಿಂತಿರುವ ರಾಷ್ಟ್ರಗಳ ಬಣ್ಣವನ್ನು ಬಯಲುಮಾಡಬೇಕಿದೆ.

ಇನ್ನು ಕೆಲ ತಿಂಗಳಲ್ಲಿ ಎಫ್ಎಟಿಎಫ್ ನ ಸಭೆಯೂ ನಡೆಯಲಿದ್ದು, ಪಾಕಿಸ್ಥಾನ ಕಪ್ಪು ಪಟ್ಟಿಗೆ ಸಿಲುಕುತ್ತದೋ ಇಲ್ಲವೋ ತಿಳಿಯದು. ಆದರೆ ಅದು ಕಂದು ಪಟ್ಟಿಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next