ಅಡಿಲೇಡ್: ಕ್ವಾರ್ಟರ್ ಫೈನಲ್ ನಷ್ಟು ಪ್ರಾಮುಖ್ಯತೆ ಪಡೆದಿದ್ದ ಮುಖಾಮುಖಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಗೆದ್ದ ಪಾಕಿಸ್ಥಾನ ತಂಡವು ಟಿ20 ವಿಶ್ವಕಪ್ 2022ರ ಸೆಮಿ ಫೈನಲ್ ಪ್ರವೇಶಿಸಿದೆ.
ನೆದರ್ಲ್ಯಾಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಸೋತ ಕಾರಣ ಈ ಪಂದ್ಯ ಹೆಚ್ಚಿನ ಮಹತ್ವ ಪಡೆದಿತ್ತು. ಈ ಪಂದ್ಯದಲ್ಲಿ ಗೆದ್ದವರು ಸೆಮಿ ಫೈನಲ್ ಅರ್ಹತೆ ಪಡೆಯಲಿದ್ದರು. ಇದರಲ್ಲಿ ಉತ್ತೀರ್ಣರಾದ ಬಾಬಾರ್ ಪಡೆ ಸೆಮಿಗೆ ಎಂಟ್ರಿ ನೀಡಿದೆ.
ಅಡಿಲೇಡ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದರೆ, ಪಾಕಿಸ್ಥಾನವು 18.1 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಬಾಂಗ್ಲಾಗೆ ಶಾಂಟೋ ಅರ್ಧಶತಕ ಬಾರಿಸಿ ನೆರವಾದರು. ಅತಿಫ್ ಹುಸೈನ್ 24 ರನ್ ಮತ್ತು ಸೌಮ್ಯ ಸರ್ಕಾರ್ 20 ರನ್ ಗಳಿಸಿದರು. ಶಕೀಬ್ ವಿವಾದಾತ್ಮಕ ರೀತಿಯಲ್ಲಿ ಔಟಾದರು. ಪಾಕ್ ಪರ ಶಹೀನ್ ಅಫ್ರಿದಿ ನಾಲ್ಕು ವಿಕೆಟ್ ಕಿತ್ತರೆ, ಎರಡು ವಿಕೆಟ್ ಶದಾಬ್ ಪಾಲಾಯಿತು.
ಗುರಿ ಬೆನ್ನತ್ತಿದ ಪಾಕ್ ಗೆ ಉತ್ತಮ ಆರಂಭ ದೊರಕಿತು. ರಿಜ್ವಾನ್ 32 ಮತ್ತು ಬಾಬರ್ 25 ರನ್ ಮಾಡಿದರು. ಹ್ಯಾರಿಸ್ 31 ಮತ್ತು ಶಾನ್ ಮಸೂದ್ ಅಜೇಯ 24 ರನ್ ಗಳಿಸಿದರು.
ಕಳಪೆ ಫೀಲ್ಡಿಂಗ್ ಗೆ ಬೆಲೆ ತೆತ್ತ ಬಾಂಗ್ಲಾದೇಶವು ಐದು ವಿಕೆಟ್ ಗಳ ಸೋಲನುಭವಿಸಿತು. ಅದೃಷ್ಟದ ಬಲದ ಮೇಲೆ ಪಾಕಿಸ್ಥಾನ ಸೆಮಿ ಫೈನಲ್ ಪ್ರವೇಶ ಪಡೆಯಿತು. ಸೆಮಿ ಫೈನಲ್ ನಲ್ಲಿ ಪಾಕಿಸ್ಥಾನವು ಬಹುತೇಕ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.