Advertisement

ಪಾಕ್‌ನಲ್ಲಿ ಇಮ್ರಾನ್‌ ಹವಾ: ಇಂದು ಫ‌ಲಿತಾಂಶ

06:00 AM Jul 26, 2018 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದ 11ನೇ ಸಾರ್ವತ್ರಿಕ ಚುನಾವಣೆಗೆ ಹಿಂಸಾಚಾರದ ಮಧ್ಯೆಯೇ ಬುಧವಾರ ಮತದಾನ ಮುಕ್ತಾಯಗೊಂಡಿದ್ದು, ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಗುರುವಾರ ಫ‌ಲಿತಾಂಶ ಪ್ರಕಟವಾಗಲಿದ್ದು, ಅನಧಿಕೃತ ಮೂಲಗಳ ಪ್ರಕಾರ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ಥಾನ್‌ ತೆಹ್ರೀಕ್‌ ಎ ಇನ್ಸಾಫ್ (ಪಿಟಿಐ) ಮುಂಚೂಣಿಯಲ್ಲಿದೆ. ಆಡಳಿತಾರೂಢ ಪಾಕಿಸ್ಥಾನ ಮುಸ್ಲಿಮ್‌ ಲೀಗ್‌ ನವಾಜ್‌ (ಪಿಎಂಎಲ್‌ಎನ್‌) ಎರಡನೇ ಸ್ಥಾನದಲ್ಲಿದೆ. ಉಗ್ರ ಸಂಘಟನೆಗಳ ಬೆಂಬಲಿತ ಮುತ್ತಹಿದಾ ಮಜಿಸ್‌ ಎ ಅಮಲ್‌ ಕೂಡ ಹಲವು ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇರುವುದಾಗಿ ಸಮೀಕ್ಷೆಗಳು ತಿಳಿಸಿವೆ.

Advertisement

ರಾಷ್ಟ್ರೀಯ ಅಸೆಂಬ್ಲಿಯ 272 ಕ್ಷೇತ್ರಗಳಿಗೆ ಒಟ್ಟು 3,459 ಅಭ್ಯರ್ಥಿಗಳು ಹಾಗೂ 577 ಪ್ರಾಂತೀಯ ಅಸೆಂಬ್ಲಿಗೆ 8,396 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಿಎಂಎಲ್‌ಎನ್‌, ಪಾಕಿಸ್ಥಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಮತ್ತು ಪಿಟಿಐ ಪಕ್ಷಗಳು ಪ್ರಮುಖ ವಾಗಿವೆ. ಒಟ್ಟು 10,59,55,409 ಮತದಾರರಿದ್ದಾರೆ. ಸಾಂಪ್ರದಾಯಿಕ ಮತ ಪೆಟ್ಟಿಗೆಯಲ್ಲಿ ಮತದಾರರು ತಮ್ಮ ಮತವನ್ನು ಭದ್ರಪಡಿಸಿದ್ದು, ಬುಧವಾರ ಸಂಜೆ 7 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿದೆ.

ಹಲವೆಡೆ ಹಿಂಸಾಚಾರ
8 ಲಕ್ಷ ಭದ್ರತಾ ಸಿಬಂದಿಯನ್ನು ನಿಯೋಜಿಸ ಲಾಗಿದ್ದರೂ ಹಲವೆಡೆ ಹಿಂಸಾಚಾರ ನಡೆದಿದೆ. ಖೆಟ್ಟಾ, ಲರ್ಕಾನಾ, ಖುಜರ್‌, ಸ್ವಾಬಿ ಮತ್ತು ಕೊಹಿಸ್ಥಾನ್‌ನಲ್ಲಿ ಹಿಂಸಾಚಾರ ವರದಿಯಾಗಿದೆ. ಖೆಟ್ಟಾದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಮತಗಟ್ಟೆಯ ಬಳಿ ಆತ್ಮಹತ್ಯಾ ದಾಳಿ ನಡೆದಿದ್ದು, 31 ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಸ್ಫೋಟದಿಂದಾಗಿ ಮತದಾನ ಕೆಲವು ಗಂಟೆಗಳವರೆಗೆ ಸ್ಥಗಿತಗೊಂಡಿತ್ತು. ಈ ಕೃತ್ಯಕ್ಕೆ ಉಗ್ರ ಸಂಘಟನೆ ಐಸಿಸ್‌ ಹೊಣೆ ಹೊತ್ತುಕೊಂಡಿದೆ. ಬಲೂಚಿಸ್ಥಾನದ ಮತಗಟ್ಟೆಯ ಬಳಿಯೂ ಗ್ರೆನೇಡ್‌ ದಾಳಿ ನಡೆದಿದ್ದು, ಒಬ್ಬ ಪೊಲೀಸ್‌ ಸಾವನ್ನಪ್ಪಿ, ಮೂವರಿಗೆ ಗಾಯವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next