ನವದೆಹಲಿ : ಬಾಲಿವುಡ್‍ನ ಹಿಂದಿ ಮೀಡಿಯಂ ಸಿನಿಮಾದಲ್ಲಿ ನಟಿಸಿದ್ದ ಪಾಕ್ ನಟಿ ಸಬಾ ಖಮರ್ ಹಾಗೂ ಗಾಯಕ ಬಿಲಾಲ್ ಸೈಯದ್ ವಿರುದ್ಧ ಪಾಕಿಸ್ತಾನದ ಸ್ಥಳೀಯ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ.
ಲಾಹೋರ್ ನ ಐತಿಹಾಸಿಕ ಮಸೀದಿಯೊಂದರ ಮುಂದೆ ಡ್ಯಾನ್ಸ್ ವಿಡಿಯೋ ಚಿತ್ರೀಕರಣ ಮಾಡಿದ್ದರಿಂದ ಸಬಾ ವಿರುದ್ಧ ದೂರು ದಾಖಲಾಗಿತ್ತು. ಡ್ಯಾನ್ಸ್ ಮಾಡಿ ಮಸೀದಿ ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಸಬಾ ಹಾಗೂ ಬಿಬಾಲ್ ವಿರುದ್ಧ ದೂರು ದಾಖಲಿಸಲಾಗಿತ್ತು. ಪಾಕಿಸ್ತಾನ ಪಿನಲ್ ಕೋಡ್ 256 ರ ಅಡಿ ಇಬ್ಬರು ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ನ್ಯಾಯಾಲಯದಲ್ಲಿ ಹಲವು ದಿನದಿಂದ ಈ ಕುರಿತು ವಿಚಾರಣೆ ಚಾಲ್ತಿಯಲ್ಲಿತ್ತು. ಆದರೆ, ಹಲವು ಸಮನ್ಸ್ ನೀಡಿದ್ದರೂ ಸದಾ ಖಮರ್ ಹಾಗೂ ಬಿಲಾಲ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲವಾದ್ದರಿಂದ ಇಬ್ಬರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿದೆ. ಡ್ಯಾನ್ಸ್ ವಿಡಿಯೋಕ್ಕೆ ಅನುಮತಿ ನೀಡಿದ ಇಬ್ಬರು ಅಧಿಕಾರಿಗಳನ್ನು ಸಹ ಅಮಾನತು ಮಾಡಲಾಗಿದೆ.
ಸಬಾ ಖಮರ್‌ರ ಡ್ಯಾನ್ಸ್ ವಿಡಿಯೋ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಸಬಾ ಖಮರ್‌ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ನಿಂದನೆ, ಕೊಲೆ ಬೆದರಿಕೆಗಳು ಕೂಡ ಬಂದಿವೆ. ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಇಬ್ಬರೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣ ಮೂಲಕ ಕ್ಷಮೆ ಕೇಳಿದ್ದಾರೆ. ”ಮ್ಯೂಸಿಕ್ ವಿಡಿಯೋನಲ್ಲಿ ಮದುವೆಯ ದೃಶ್ಯ ಇತ್ತು. ಅದನ್ನು ಮಸೀದಿಯ ಮುಂದೆ ಚಿತ್ರೀಕರಣ ಮಾಡಿದ್ದೇವೆ. ಅದಕ್ಕೆ ಯಾವುದೇ ಹಿನ್ನೆಲೆ ಸಂಗೀತವನ್ನು ಸಹ ನಾವು ನೀಡಿಲ್ಲ. ನಮ್ಮ ವಿಡಿಯೋದಿಂದ ಯಾರದ್ದಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ” ಎಂದಿದ್ದಾರೆ.
ಇನ್ನು ಪಾಕಿಸ್ತಾನದ ಸಾಮಾಜಿಕ ಜಾಲತಾಣ ಸೆಲೆಬ್ರಿಟಿ ಖಂದಿಲ್ ಬಲೂಚ್ ಜೀವನ ಆಧರಿತ ಸಿನಿಮಾದಲ್ಲಿಯೂ ಸಬಾ ನಟಿಸಿದ್ದರು. ಸಾಮಾಜಿಕ ಜಾಲತಾಣ ಸ್ಟಾರ್ ಆಗಿದ್ದ ಖಂದಿಲ್ ಬಲೂಚ್ ಕುಟುಂಬ ಗೌರವನ್ನು ಮಣ್ಣುಪಾಲು ಮಾಡುತ್ತಿದ್ದಾಳೆ ಎಂದು ಆರೋಪಿಸಿ ಆಕೆಯ ಅಣ್ಣನೇ ಆಕೆಯನ್ನು ಕೊಲೆ ಮಾಡಿದ್ದ. ಈ ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.
ಸಬಾ ಖಮರ್‌ರ ಡ್ಯಾನ್ಸ್ ವಿಡಿಯೋ ಬಿಡುಗಡೆ ಆದ ಬಳಿಕ ಜಮಾತ್-ಇ-ಇಸ್ಲಾಂ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ನಟಿಯ ವಿರುದ್ಧ ಪ್ರತಿಭಟನೆ ಮಾಡಿದ್ದು, ಆಕೆಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯ ಮಾಡಿವೆ.