ಇಸ್ಲಾಮಾಬಾದ್: ಜಾಗತಿಕ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(ಎಫ್ಎಟಿಎಫ್)ನ ಕಂದು ಪಟ್ಟಿಯಿಂದ ಹೊರಗೆ ಬರಬೇಕು ಎಂದು ಸತತ ಪ್ರಯತ್ನ ಮಾಡುತ್ತಿರುವ ಪಾಕಿಸ್ತಾನ ಇದೀಗ ಅದಕ್ಕೆಂದು ಹೊಸ ತಂತ್ರ ಮಾಡಿದೆ.
ಉಗ್ರ ಸಂಘಟನೆಯಾದ ಜೈಶ್-ಇ-ಮೊಹಮದ್‌ನ ನಾಯಕ ಮಸೂದ್ ಅಜರ್ ಅಲ್ವಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್‌ಪುರದಿಂದ ಅಫ್ಘಾನಿಸ್ತಾನಕ್ಕೆ ಸ್ಥಳಾಂತರಗೊಂಡಿದ್ದಾನೆ ಎಂದು ಪಾಕಿಸ್ತಾನ ಹೇಳಿದೆ.
ತಾಲಿಬಾನ್ ಸರ್ಕಾರ ಆಡಳಿತಕ್ಕೆ ಬಂದ ಬೆನ್ನಲ್ಲೇ ಆತ ಅಲ್ಲಿಗೆ ಸ್ಥಳಾಂತರಗೊಂಡಿದ್ದು, ಆತನಿರುವ ಸ್ಥಳ ಪತ್ತೆ ಹಚ್ಚುವುದಕ್ಕೆ ತಾಲಿಬಾನಿ ಸರ್ಕಾರ ಸಹಕರಿಸಬೇಕು ಎಂದೂ ಮನವಿ ಮಾಡಿದೆ.
ಆದರೆ ಈ ವಿಚಾರವನ್ನು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ತಳ್ಳಿ ಹಾಕಿದೆ. “ಯಾವುದೇ ರಾಷ್ಟ್ರಕ್ಕೆ ಹಾನಿ ಮಾಡುವಂತಹ ಸಂಘಟನೆಯನ್ನು ನಾವು ನಮ್ಮ ದೇಶದೊಳಗೆ ಸೇರಿಸಿಕೊಳ್ಳುತ್ತಿಲ್ಲ. ಮಸೂದ್ ಅಜರ್ ನಮ್ಮಲ್ಲಿ ಸ್ಥಳಾವಕಾಶ ಕೇಳಿಯೇ ಇಲ್ಲ’ ಎಂದು ಸ್ಪಷ್ಟವಾಗಿ ನುಡಿದಿದೆ.
ಮಸೂದ್‌ನ ಸಹೋದರ, ಜೆಇಎಂನ ಕಮಾಂಡರ್ ರೌಫ್ ಅಜರ್‌ಗೂ ಪಾಕಿಸ್ತಾನ ತಮ್ಮ ನೆಲದಲ್ಲಿ ರಕ್ಷಣೆ ಕೊಟ್ಟಿದೆ.