Advertisement

ಅಫ್ಘನ್ ಗಡಿಯಲ್ಲಿ ಪಾಕ್‌ ಪಡೆ ಪುಂಡಾಟ; ದಾಳಿಗೆ 9 ನಾಗರಿಕರು ಸಾವು, 50 ಮಂದಿಗೆ ಗಾಯ

08:12 AM Aug 01, 2020 | mahesh |

ಕಂದಹಾರ್‌: ನೆರೆ ರಾಷ್ಟ್ರಗಳಲ್ಲಿ ಶಾಂತಿ ಕದಡುವ ಪಾಕಿಸ್ಥಾನದ ಚಾಳಿ ಮುಂದುವರಿದಿದೆ. ಪದೇ ಪದೆ ಭಾರತದ ಗಡಿಗಳಲ್ಲಿ ಅಪ್ರಚೋದಿತ ದಾಳಿ ನಡೆಸುವ ಪಾಕಿಸ್ಥಾನದ ಸೇನೆಯು ಈಗ ನೆರೆರಾಷ್ಟ್ರ ಅಫ್ಘಾನಿಸ್ಥಾನದ ಗಡಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಏಕಾಏಕಿ ದಾಳಿ ನಡೆಸಿದೆ. ಪರಿಣಾಮ, 9 ನಾಗರಿಕರು ಮೃತಪಟ್ಟು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Advertisement

ಕಂದಹಾರ್‌ ಪ್ರಾಂತ್ಯದ ಸ್ಪಿನ್‌ ಬೋಲ್ಡಕ್‌ ಜಿಲ್ಲೆಯಲ್ಲಿನ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕ್‌ ಪಡೆ ನಡೆಸಿದ ದಾಳಿಯಿಂದ ಪ್ರಾಣಹಾನಿ ಉಂಟಾಗಿದೆ ಎಂದು ಅಫ್ಘನ್‌ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಪಾಕಿಸ್ಥಾನದ ಈ ಹೀನ ಕೃತ್ಯದ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪಾಕ್‌ ದುಸ್ಸಾಹಸಕ್ಕೆ ತಕ್ಕ ಪ್ರತ್ಯುತ್ತರ ನೀಡುವಂತೆ ಅಟಲ್‌ 205, ಸೆಲಾಬ್‌ 201, ಥಂಡರ್‌ 203 ಸೇರಿದಂತೆ ಎಲ್ಲ ಆರ್ಮಿ ಕಾರ್ಪ್‌ಗಳಿಗೆ ಅಫ್ಘನ್‌ ಸೇನಾ ಮುಖ್ಯಸ್ಥ ಯಾಸಿನ್‌ ಝಿಯಾ ಕರೆ ನೀಡಿದ್ದಾರೆ. ಜತೆಗೆ ದುರಾಂದ್‌ ಲೈನ್‌ನಲ್ಲಿ ನಿಯೋಜಿಸಲ್ಪಟ್ಟಿರುವ ಸೈನಿಕರಿಗೆ ಸೂಕ್ತ ಶಸ್ತ್ರಾಸ್ತ್ರಗಳನ್ನು ರವಾನಿಸಲು ಆದೇಶಿಸಿದ್ದಾರೆ.
ಅಫ್ಘನ್‌ ವಾಯುಪಡೆ ಮತ್ತು ದೇಶದ ವಿಶೇಷ ಪಡೆಗಳು ಕೂಡ ಅಲರ್ಟ್‌ ಆಗಿದ್ದು, ಪಾಕಿಸ್ಥಾನದ ಸೇನೆಯ ವಿರುದ್ಧ ಪ್ರತೀಕಾರಕ್ಕೆ ಸಜ್ಜಾಗಿವೆ ಎಂದು ಮೂಲಗಳು ತಿಳಿಸಿವೆ. ಗುರುವಾರವಷ್ಟೇ ಇಲ್ಲಿನ ಪೂರ್ವ ಲೋಗಾರ್‌ ಪ್ರಾಂತ್ಯದಲ್ಲಿ ಆತ್ಮಾಹುತಿ ದಾಳಿ ನಡೆದಿದ್ದು, ಕನಿಷ್ಠ 9 ಮಂದಿ ಮೃತಪಟ್ಟು, 40 ಮಂದಿ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next