Advertisement

ಆರ್ಥಿಕ ನಿರ್ಬಂಧ ಪಟ್ಟಿಗೆ ಪಾಕಿಸ್ಥಾನ ಸೇರ್ಪಡೆ

07:40 AM Feb 24, 2018 | Team Udayavani |

ಹೊಸದಿಲ್ಲಿ: ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುತ್ತಾ ಬಂದಿರುವ ಪಾಕಿಸ್ಥಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ನಿರ್ಬಂಧದ ಭೀತಿ ಎದುರಾಗಿದೆ. ಪಾಕ್‌ ವಿರುದ್ಧ ಇಂಥದ್ದೊಂದು ನಿರ್ಬಂಧ ಹೇರಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ದುರ್ಬಳಕೆಯ ಮೇಲೆ ನಿಗಾ ವಹಿಸುತ್ತಿರುವ ಆರ್ಥಿಕ ನಿರ್ಬಂಧ ಕಾರ್ಯಪಡೆ (ಎಫ್ಎಟಿಎಫ್) ತನ್ನ ಕಂದು ಪಟ್ಟಿಗೆ ಪಾಕಿಸ್ಥಾನವನ್ನು ಸೇರಿಸಲು ನಿರ್ಧರಿಸಿದೆ. ಈ ಹಿಂದೆ ಸೌದಿ ಅರೇಬಿಯಾ ನೇತೃತ್ವದಲ್ಲಿ ಗಲ್ಫ್ ದೇಶಗಳು, ಚೀನ, ಟರ್ಕಿ ವಿರೋಧ ವ್ಯಕ್ತಪಡಿಸಿತ್ತಾದರೂ, ಕೊನೆಯ ಕ್ಷಣದಲ್ಲಿ ಟರ್ಕಿ ಹೊರತುಪಡಿಸಿ ಎರಡೂ ದೇಶಗಳು ತಮ್ಮ ವಿರೋಧವನ್ನು ಹಿಂಪಡೆದಿವೆ. ಈ ಬೆಳವಣಿಗೆಗಳು ಪಾಕಿಸ್ಥಾನಕ್ಕೆ ತೀವ್ರ ಮುಖಭಂಗ ಉಂಟುಮಾಡಿವೆ.

Advertisement

ಪಾಕಿಸ್ಥಾನವನ್ನು ಆರ್ಥಿಕ ನಿರ್ಬಂಧ ಪಟ್ಟಿಗೆ ಸೇರಿಸುವುದಕ್ಕೆ ಕಳೆದ ಎರಡು ವಾರಗಳಿಂದಲೂ ಅಮೆರಿಕ ಭಾರೀ ಲಾಬಿ ನಡೆಸಿತ್ತು. 35 ಸದಸ್ಯ ರಾಷ್ಟ್ರಗಳೊಂದಿಗೆ ಅಮೆರಿಕ ಮಾತುಕತೆ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಈ ಉಗ್ರ ಸಂಘಟನೆಗಳು ನಡೆಸುವ ಸಾಮಾಜಿಕ ಕಾರ್ಯಗಳನ್ನು ಪ್ರಸ್ತಾವಿಸಿ ಪಾಕಿಸ್ಥಾನ ಸಮರ್ಥನೆ ಮಾಡಿಕೊಂಡಿತ್ತು. ಅಷ್ಟೇ ಅಲ್ಲ, ಎಫ್ಎಟಿಎಫ್ನಲ್ಲಿ ಈ ಬಗ್ಗೆ ಯಾವುದೇ ಸಹಮತವಿಲ್ಲ. ಹೀಗಾಗಿ ನಮ್ಮ ವಾದಕ್ಕೇ ಜಯ ಸಿಗುತ್ತದೆ ಎಂದು ಪಾಕಿಸ್ಥಾನ ಹೇಳಿಕೊಂಡಿತ್ತು. ಅಷ್ಟೇ ಅಲ್ಲ, ಮುಂಬಯಿ ದಾಳಿ ಸಂಚುಕೋರ ಹಫೀಜ್‌ ಸಯೀದ್‌ ಸಹಿತ ವಿಶ್ವಸಂಸ್ಥೆ ಘೋಷಿಸಿದ ಉಗ್ರರನ್ನು ಉಗ್ರರ ಪಟ್ಟಿಗೆ ಸೇರಿಸುವ ಕ್ರಮವನ್ನೂ ಕೈಗೊಂಡಿತ್ತು.

ಆದರೆ ಪಾಕ್‌ ಸಮರ್ಥನೆಗೆ ಮನ್ನಣೆ ಸಿಗಲಿಲ್ಲ. ಪ್ಯಾರಿಸ್‌ನಲ್ಲಿ ನಡೆದ ಸಭೆ ಯಲ್ಲಿ ಗುರುವಾರವೇ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದೆ.

ಏನಿದು ನಿರ್ಬಂಧ?
ಪಾಕ್‌ಗೆ ಈ ನಿರ್ಬಂಧ ಹೊಸದಲ್ಲ. 2012ರಿಂದ 2015ರ ವರೆಗೆ ಇದೇ ರೀತಿಯ ನಿರ್ಬಂಧ ಹೇರಲಾಗಿತ್ತು. ಆದರೆ 2015ರಲ್ಲಿ ರಷ್ಯಾ ಮತ್ತು ಇತರ ದೇಶಗಳೊಂದಿಗೆ ಲಾಬಿ ನಡೆಸಿ ಈ ಪಟ್ಟಿಯಿಂದ ಹೊರಬರುವಲ್ಲಿ ಪಾಕ್‌ ಯಶಸ್ವಿಯಾಗಿತ್ತು. ಎಫ್ಎಟಿಎಫ್ ಗ್ರೇ ಲಿಸ್ಟ್‌ಗೆ ಯಾವುದೇ ದೇಶವನ್ನು ಸೇರಿಸಿದರೆ ವಿದೇಶಗಳಿಂದ ಹಣಕಾಸು ಪಡೆಯುವುದು ಸುಲಭವಲ್ಲ. ಸರಕಾರ ಹೆಚ್ಚು ಬಡ್ಡಿ ವಿಧಿಸಿ ವಿದೇಶಗಳಿಂದ ಹಣ ಪಡೆಯಬೇಕಾಗುತ್ತದೆ. ಸಾಲ ನೀಡುವುದು ಕೂಡ ವಿದೇಶಿ ಬ್ಯಾಂಕ್‌ಗಳಿಗೆ ಸುಲಭ ಸಾಧ್ಯವಲ್ಲ. ಪಾಕ್‌ನಲ್ಲಿ ಚುನಾವಣೆ ಸಮೀಪಿಸುತ್ತಿರುವ ಸಂದರ್ಭ ಈ ನಿರ್ಧಾರ ಭಾರೀ ಪರಿಣಾಮ ಉಂಟು ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next