Advertisement

ಪಾಕಿಗೆ ಯೂನಿಸ್‌, ಮಳೆ ತಾತ್ಕಾಲಿಕ ರಕ್ಷಣೆ

03:45 AM Jan 06, 2017 | Team Udayavani |

ಸಿಡ್ನಿ: ಸಿಡ್ನಿ ಟೆಸ್ಟ್‌ ಪಂದ್ಯದ 3ನೇ ದಿನದಾಟದಲ್ಲಿ ಅನುಭವಿ ಬ್ಯಾಟ್ಸ್‌ಮನ್‌ ಯೂನಿಸ್‌ ಖಾನ್‌ ಮತ್ತು ಮಳೆಯಿಂದ ಪಾಕಿಸ್ಥಾನಕ್ಕೆ ತಾತ್ಕಾಲಿಕ ರಕ್ಷಣೆ ಲಭಿಸಿದೆ. ಆಸ್ಟ್ರೇಲಿಯದ 538 ರನ್ನುಗಳ ಬೃಹತ್‌ ಮೊತ್ತಕ್ಕೆ ಜವಾಬು ನೀಡುತ್ತಿರುವ ಮಿಸ್ಬಾ ಪಡೆ 3ನೇ ಗುರುವಾರದ ಅಂತ್ಯಕ್ಕೆ 8 ವಿಕೆಟಿಗೆ 271 ರನ್‌ ಗಳಿಸಿದೆ. ಇನ್ನೂ 267 ರನ್ನುಗಳ ಹಿನ್ನಡೆಯಲ್ಲಿದೆ.

Advertisement

115ನೇ ಟೆಸ್ಟ್‌ ಆಡುತ್ತಿರುವ ಅನುಭವಿ ಬ್ಯಾಟ್ಸ್‌ಮನ್‌ ಯೂನಿಸ್‌ ಖಾನ್‌ 136 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 
2ಕ್ಕೆ 126 ರನ್‌ ಮಾಡಿದಲ್ಲಿಂದ ಪಾಕ್‌ ಆಟ ಮುಂದುವರಿಸಿತ್ತು. ಆದರೆ ಮುಂಜಾನೆಯ ಮಳೆಯಿಂದ ಮೊದಲ ಅವಧಿಯ ಆಟ ನಡೆಯಲಿಲ್ಲ. ಲಂಚ್‌ ಕಳೆದು ಬಹಳ ಹೊತ್ತಿನ ಬಳಿಕ ಆಟಗಾರರು ಅಂಗಳಕ್ಕಿಳಿದರು. 54 ಓವರ್‌ಗಳ ಆಟವಷ್ಟೇ ಸಾಗಿತು.

ಲಂಚ್‌-ಟೀ ನಡುವಿನಲ್ಲಿ ಪಾಕ್‌ 71 ರನ್‌ ಮಾಡಿದ ಆರಂಭಕಾರ ಅಜರ್‌ ಅಲಿ ಅವರ ವಿಕೆಟನ್ನಷ್ಟೇ ಕಳೆದುಕೊಂಡು 177ರ ತನಕ ಬಂದು ನಿಂತಿತು. ಆದರೆ ಅಂತಿಮ ಅವಧಿಯಲ್ಲಿ ಆಸೀಸ್‌ ದಾಳಿ ಹರಿತಗೊಂಡಿತು. ಪಾಕ್‌ ಒಂದೇ ಸಮನೆ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಹೋಯಿತು. 94 ರನ್‌ ಅಂತರದಲ್ಲಿ 7 ವಿಕೆಟ್‌ ಹಾರಿಹೋಯಿತು. ಯೂನಿಸ್‌ ಖಾನ್‌ ಕ್ರೀಸ್‌ ಆಕ್ರಮಿಸಿಕೊಳ್ಳದೇ ಹೋಗಿದ್ದಲ್ಲಿ ಪಾಕ್‌ ಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದ್ದುದು ಖಂಡಿತ.

11 ರಾಷ್ಟ್ರಗಳಲ್ಲಿ ಶತಕ
ಕಾಂಗರೂ ಬೌಲಿಂಗ್‌ ಆಕ್ರಮಣವನ್ನು ದಿಟ್ಟ ರೀತಿಯಲ್ಲಿ ಎದುರಿಸಿ ನಿಂತಿರುವ ಯೂನಿಸ್‌ ಖಾನ್‌ 136 ರನ್‌ ಹೊಡೆದಿದ್ದಾರೆ. 279 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿದೆ.

ಈ ಸಾಧನೆಯೊಂದಿಗೆ ಯೂನಿಸ್‌ ಖಾನ್‌ 11 ದೇಶಗಳಲ್ಲಿ ಟೆಸ್ಟ್‌ ಶತಕ ಬಾರಿಸಿದ ವಿಶ್ವದ ಪ್ರಥಮ ಬ್ಯಾಟ್ಸ್‌ಮನ್‌ ಎನಿಸಿದರು. ಇದರಲ್ಲಿ ಯುಎಇ ಕೂಡ ಸೇರಿದೆ. ಯೂನಿಸ್‌ ಈವರೆಗೆ ಆಸ್ಟ್ರೇಲಿಯದಲ್ಲಿ ಶತಕ ಹೊಡೆದಿರಲಿಲ್ಲ. ಇಲ್ಲಿ ಆಡಿದ 11ನೇ ಇನ್ನಿಂಗ್ಸ್‌ನಲ್ಲಿ ಈ ಕೊರತೆ ನೀಗಿಸಿಕೊಂಡರು. ಆಸ್ಟ್ರೇಲಿಯದಲ್ಲಿ ಯೂನಿಸ್‌ ಅವರ ಈವರೆಗಿನ ಅತ್ಯುತ್ತಮ ಸಾಧನೆಯೆಂದರೆ, 2004ರ ಮೆಲ್ಬರ್ನ್ ಟೆಸ್ಟ್‌ನಲ್ಲಿ ಹೊಡೆದ 87 ರನ್‌.

Advertisement

ಯೂನಿಸ್‌ ಖಾನ್‌ ಹೊರತುಪಡಿಸಿದರೆ 71 ರನ್‌ ಮಾಡಿದ ಅಜರ್‌ ಅಲಿ ಅವರದೇ ಪಾಕ್‌ ಸರದಿಯ ಹೆಚ್ಚಿನ ಗಳಿಕೆ. ಇವರಿಬ್ಬರು 3ನೇ ವಿಕೆಟಿಗೆ 146 ರನ್‌ ಪೇರಿಸಿದರು. ಮಿಸ್ಬಾ (18), ಶಫೀಕ್‌ (4), ಸಫ‌ìರಾಜ್‌ (18) ಅವರೆಲ್ಲ ಕಾಂಗರೂ ಬೌಲರ್‌ಗಳಿಗೆ ಸುಲಭದ ತುತ್ತಾದರು.

ಪಂದ್ಯವಿನ್ನೂ 2 ದಿನ ಕಾಣಲಿಕ್ಕಿರುವುದರಿಂದ ಆಸ್ಟ್ರೇಲಿಯದ ಕ್ಲೀನ್‌ಸಿÌàಪ್‌ ಯೋಜನೆ ಯಶಸ್ವಿಯಾಗುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-8 ವಿಕೆಟಿಗೆ ಡಿಕ್ಲೇರ್‌ 538. ಪಾಕಿಸ್ಥಾನ-8 ವಿಕೆಟಿಗೆ 271 (ಯೂನಿಸ್‌ ಬ್ಯಾಟಿಂಗ್‌ 136, ಅಲಿ 71, ಲಿಯೋನ್‌ 98ಕ್ಕೆ 3, ಹ್ಯಾಝಲ್‌ವುಡ್‌ 53ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next