ರಾವಲ್ಪಿಂಡಿ: ನ್ಯೂಜಿಲ್ಯಾಂಡ್‌ನ ಡ್ಯಾರಿಲ್ ಮಿಚೆಲ್ ಸತತ 2ನೇ ಶತಕದೊಂದಿಗೆ ಅಬ್ಬರಿಸಿದ್ದಾರೆ. ಪಾಕಿಸ್ಥಾನ ವಿರುದ್ಧ ಇಲ್ಲಿ ನಡೆಯುತ್ತಿರುವ ದ್ವಿತೀಯ ಡೇ-ನೈಟ್ ಏಕದಿನ ಪಂದ್ಯದಲ್ಲಿ ಅವರು 129 ರನ್ ಬಾರಿಸಿದ್ದಾರೆ. ಇದರೊಂದಿಗೆ ಕಿವೀಸ್ 5 ವಿಕೆಟಿಗೆ 336 ರನ್ ಪೇರಿಸಿ ಸವಾಲೊಡ್ಡಿದೆ.
ಡ್ಯಾರಿಲ್ ಮಿಚೆಲ್ ಮೊದಲ ಪಂದ್ಯದಲ್ಲಿ 113 ರನ್ ಹೊಡೆದಿದ್ದರು. ಇಲ್ಲಿ ಇದಕ್ಕೂ ಮಿಗಿಲಾದ ಬ್ಯಾಟಿಂಗ್ ಪ್ರದರ್ಶನವಿತ್ತರು. ಅವರ 129 ರನ್ 119 ಎಸೆತಗಳಿಂದ ಬಂತು. ಸಿಡಿಸಿದ್ದು 8 ಬೌಂಡರಿ ಹಾಗೂ 3 ಸಿಕ್ಸರ್. ನಾಯಕ ಟಾಮ್ ಲ್ಯಾಥಂ ಕೇವಲ 2 ರನ್ನಿನಿಂದ ಶತಕ ವಂಚಿತರಾಗಬೇಕಾಯಿತು. ಮಿಚೆಲ್-ಲ್ಯಾಥಂ 3ನೇ ವಿಕೆಟಿಗೆ 183 ರನ್ ಪೇರಿಸಿದರು. ಪಾಕ್ ಪರ ಹ್ಯಾರಿಸ್ ರವೂಫ್ 4 ವಿಕೆಟ್ ಕಿತ್ತರು.
ಮೊದಲ ಏಕದಿನ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದಿರುವ ಪಾಕಿಸ್ಥಾನ 1-0 ಮುನ್ನಡೆಯಲ್ಲಿದೆ.