ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿನ ಭಾರೀ ಮಳೆ, ಪ್ರವಾಹದಿಂದಾಗಿ ಸಂಭವಿಸಿದ ಜೀವ ಹಾನಿ, ಬೆಳೆ ನಾಶದ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಾಳಜಿ ವಹಿಸಿ ಕಳವಳ ವ್ಯಕ್ತಪಡಿಸಿರುವುದಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಧನ್ಯವಾದ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ದಾಳಿಂಬೆ ಬರಗಾಲದ ಸಮೃದ್ಧ ಬೆಳೆ: 10 ಎಕರೆ, 100 ಟನ್ ಇಳುವರಿ 1 ಕೋಟಿ ಆದಾಯ ..!
ಭೀಕರ ಪ್ರವಾಹ, ಮಳೆಯಿಂದಾಗಿ ಅಪಾರ ನಷ್ಟ ಉಂಟಾಗಿದ್ದು, ಈ ನೈಸರ್ಗಿಕ ವಿಕೋಪದ ಪ್ರತಿಕೂಲ ಪರಿಣಾಮ ಎದುರಿಸುವ ಮೂಲಕ ಪಾಕಿಸ್ತಾನ ಮತ್ತೆ ಸಹಜ ಸ್ಥಿತಿಗೆ ಮರಳುವ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.
ಪಾಕಿಸ್ತಾನದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಈವರೆಗೆ 1,100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 33 ಮಿಲಿಯನ್ ಜನರನ್ನು ಸ್ಥಳಾಂತರಿಸಲಾಗಿದೆ. ಎರಡು ಲಕ್ಷಕ್ಕೂ ಅಧಿಕ ಮಂದಿ ಮನೆ ಕಳೆದುಕೊಂಡಿದ್ದಾರೆ.
ಪಾಕಿಸ್ತಾನದಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುವುದಾಗಿ ಪಾಕ್ ಪ್ರಧಾನಿ ಷರೀಫ್ ತಿಳಿಸಿದ್ದಾರೆ. ಭೀಕರ ಪ್ರವಾಹದಿಂದ ಪಾಕಿಸ್ತಾನದ ಜನರು ಕಂಗೆಟ್ಟು ಹೋಗಿದ್ದು, ಈ ನೈಸರ್ಗಿಕ ವಿಕೋಪದ ನಷ್ಟದಿಂದ ನಮ್ಮ ಜನರು ಹೊರಬಂದು, ಮತ್ತೆ ತಮ್ಮ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದು ಷರೀಫ್ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.