ಹೊಸದಿಲ್ಲಿ : ‘ಎಂದೂ ಸರಿದಾರಿಗೆ ಬಾರದ ಪಾಕಿಸ್ಥಾನವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ’ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ‘ಪಾಕ್ ಸೈನಿಕರು ನಿರಂತರವಾಗಿ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಪಡೆಗಳು ಯಾವ ರೀತಿಯ ಪ್ರತೀಕಾರದ ಉತ್ತರವನ್ನು ನೀಡುತ್ತಿವೆ ಎಂಬ ಬಗ್ಗೆ ಸರಕಾರ ಇನ್ನು ಸೇನೆಯನ್ನು ಕೇಳುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.
ಗಡಿ ರಕ್ಷಣಾ ಪಡೆಯ 16ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಪ್ರಧಾನ ಆಶಯ ಭಾಷಣ ಮಾಡುತ್ತಿದ್ದ ಅವರು, ಪಾಕಿಸ್ಥಾನವನ್ನು ನೇರವಾಗಿ ಹೆಸರಿಸದೆ, “ಭಾರತ ಶಾಂತಿ ಬಯಿಸಿದರೂ ನಮ್ಮ ನೆರೆಯ ದೇಶವೊಂದು ಸರ್ವಥಾ ಸರಿದಾರಿಗೆ ಬಾರದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ’ ಎಂದು ಹೇಳಿದರು.
“ನೆರೆಯ ದೇಶದ (ಪಾಕಿಸ್ಥಾನದ) ಈ ರೀತಿಯ ಕೃತ್ಯ ಸಂಶೋಧನೆಯ ವಿಷಯವಾಗಿದ್ದು ಅದರ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವಾಗಿದೆ’ ಎಂದು ಸಿಂಗ್ ವ್ಯಂಗ್ಯದಿಂದ ಹೇಳಿದರು.
“ಶತ್ರುಗಳತ್ತ ಮೊದಲ ಗುಂಡನ್ನು ನಾವು ಎಂದಿಗೂ ಎಸೆಯಬಾರದು ಎಂದು ಬಿಎಸ್‌ಎಫ್ ಮತ್ತು ಇತರಗಡಿ ರಕ್ಷಣಾ ಪಡೆಗಳಿಗೆ ನಾವು ಹೇಳಿದ್ದೇವೆ; ಹಾಗಿದ್ದರೂ ಶತ್ರುಗಳು ಎಸೆಯುವ ಗುಂಡಿಗೆ ನೀವು ಯಾವ ರೀತಿಯ ಉತ್ತರ ನೀಡುವಿರಿ ಎಂಬ ಪ್ರಶ್ನೆಯನ್ನು ಸೇನೆಗೆ ಯಾರೂ ಎಂದೂ ಕೇಳಲಾರರು’ ಎಂದು ರಾಜನಾಥ್ ಸಿಂಗ್ ಹೇಳಿದರು.
ಕಳೆದ ಕೆಲವು ದಿನಗಳಿಂದ ಜಮ್ಮು ವಲಯದಲ್ಲಿ ಪಾಕ್ ಸೈನಿಕರು ಅಪ್ರಚೋದಿತವಾಗಿ ನಡೆಸುತ್ತಿರುವ ನಿರಂತರ ಗುಂಡಿನ ದಾಳಿಗೆ ಭಾರತೀಯ ಪಡೆಗಳು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ತಕ್ಕುದಾದ ಉತ್ತರ ನೀಡುತ್ತಿವೆ ಎಂದು ರಾಜನಾಥ್ ಸಿಂಗ್ ಹೇಳಿದರು.