ಇಸ್ಲಾಮಾಬಾದ್ : ”ಪಾಕಿಸ್ಥಾನ ತನ್ನ ಆಂತರಿಕ ಹಾಗೂ ಪ್ರಾದೇಶಿಕ ಭದ್ರತೆಯನ್ನು ಹೊಂದಲು ತನ್ನ ನೆಲದಲ್ಲಿ ಹಾಗೂ ತನ್ನ ಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರನ್ನು ತಡೆಯಬೇಕು” ಎಂದು ಅಮೆರಿಕದ ಉನ್ನತ ಜನರಲ್ ಓರ್ವರು ಪಾಕಿಸ್ಥಾನದ ಮಿಲಿಟರಿ ನಾಯಕತ್ವಕ್ಕೆ ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದಾರೆ.
ಇಸ್ಲಾಮಾಬಾದಿಗೆ ಎರಡು ದಿನಗಳ ಪಾಕ್ ಭೇಟಿಯಲ್ಲಿ ಬಂದಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್)ನ ಕಮಾಂಡರ್ ಜೋಸೆಫ್ ವೋಟೆಲ್ ಅವರು, ಪಾಕ್ – ಅಫ್ಘಾನ್ ಸಂಬಂಧಗಳನ್ನು ಸುಧಾರಿಸುವುದಕ್ಕೆ ಇಸ್ಲಾಮಾಬಾದ್ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.
ಮಾತ್ರವಲ್ಲ ತನ್ನ ನೆಲದಲ್ಲಿ ಹಾಗೂ ಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರನ್ನು ಸಂಘಟಿತ ಮಿಲಿಟರಿ ಕಾರ್ಯಾಚರಣೆಯ ಮೂಲಕ ಮಟ್ಟ ಹಾಕಬೇಕು; ಹೀಗೆ ಮಾಡಿದಲ್ಲಿ ಮಾತ್ರವೇ ಪಾಕಿಸ್ಥಾನಕ್ಕೆ ಆಂತರಿಕ ಮತ್ತು ಪ್ರಾದೇಶಿಕ ಗಡಿ ಭದ್ರತೆ ಸಾಧಿಸಲು ಸಾಧ್ಯ; ದೇಶದ ಮಿಲಿಟರಿ ನಾಯಕತ್ವ ಈ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು.
ವೋಟೆಲ್ ಅವರು ಹಿರಿಯ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಬಾಜ್‌ವಾ ಸೇರಿದಂತೆ ಹಲವು ಹಿರಿಯ ಮಿಲಿಟರಿ ಕಮಾಂಡರ್‌ಗಳನ್ನು, ಭದ್ರತಾ ಸಮಿತಿಯ ಜಂಟಿ ಮುಖ್ಯಸ್ಥರಾಗಿರುವ ಜನರಲ್ ಝುಬೇರ್ ಹಯಾತ್ ಮತ್ತು ಐಎಸ್‌ಐ ಮಹಾ ನಿರ್ದೇಶಕ ಲೆ| ಜ| ನವೀದ್ ಮುಖ್‌ತಾರ್ ಅವರನ್ನು ಭೇಟಿಯಾಗಿ ಚರ್ಚಿಸಿದರು.