ಮೂಲತಃ ಕಾಸರಗೋಡು ಕುಂಬ್ಳೆ ಇಚ್ಲಂಪಾಡಿಯವರಾದ ಐ.ಎನ್.ರೈ (ಇಚ್ಲಂಪಾಡಿ ನಾಣಪ್ಪ ರೈ) ಅವರು 1970ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು ಬಾಂಗ್ಲಾ ಯುದ್ಧ ಸೇರಿದಂತೆ ಹಲವು ಯುದ್ದ-ಸಂಘರ್ಷ-ಸಂಧಾನಗಳಲ್ಲಿ ಸೈನ್ಯದ ನೇತೃತ್ವ ವಹಿಸಿದ್ದಾರೆ. ಒಟ್ಟು 34 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಬ್ರಿಗೇಡಿಯರ್ ಐ.ಎನ್.ರೈ
1970ರಲ್ಲಿ ಸೇನೆಯ ಸಿಕ್ಖ್ ಲೈಟ್ ಇನೆ#ಂಟ್ರಿ ರೆಜಿಮೆಂಟ್‌ನಲ್ಲಿ ಕಮಿಷನ್ ಆಫೀಸರ್ ಆಗಿ ಸೇರ್ಪಡೆಯಾದೆ. ಮರು ವರ್ಷವೇ ಬಾಂಗ್ಲಾ ಯುದ್ಧ. ಅಮೃತ್‌ಸರ ಮತ್ತು ಲಾಹೋರ್ ನಡುವಿನ ರಾವಿ ನದಿ ತಟದ ಬಳಿ ವಾಘಾ ಗಡಿಗಿಂತ ಉತ್ತರದಲ್ಲಿ ಆಗಸ್ಟ್ ತಿಂಗಳಲ್ಲಿ ಡಿಫೆನ್ಸ್ ತೆಗೆದುಕೊಂಡಿದ್ದೆವು. ಪೂರ್ವ ಪಾಕಿಸ್ಥಾನದಲ್ಲಿ ಯುದ್ಧ ನಡೆಯುತ್ತಿರುವಾಗ ನಮ್ಮ ಗಡಿಯಲ್ಲಿ ಕಟ್ಟೆಚ್ಚರ ವಹಿಸುವುದು ನಮ್ಮ ಮುಖ್ಯ ಜವಾಬ್ದಾರಿಯಾಗಿತ್ತು. 3 ತಿಂಗಳು ಪೂರ್ಣ ಸಿದ್ಧತೆ ಮಾಡಿದ್ದೆವು. ಪೂರ್ವಪಾಕಿಸ್ಥಾನ ದಲ್ಲಿ ಅಲ್ಲಿನ ನಿರಾಶ್ರಿತರ ಪಡೆ “ಮುಕ್ತಿವಾಹಿನಿ’ಯವರಿಗೆ ಭಾರತೀಯ ಸೇನೆ ಗೌಪ್ಯವಾಗಿ ತರಬೇತಿ ನೀಡಿತ್ತು. ಅವರು ಪಾಕ್ ಸೈನಿಕರ ವಿರುದ್ಧ ಭಾರತೀಯ ಸೇನೆಗೆ ನೆರವಾಗಿದ್ದರು. ಅಲ್ಲಿ ಭಾರತೀಯ ಸೇನೆಯವರು ಮುಂದಡಿ ಇಟ್ಟಿದ್ದರು. ಇತ್ತ ರಾವಿ ನದಿ ಬಳಿ ಯಾವಾಗ ಯುದ್ಧ ಆರಂಭವಾಗುತ್ತದೆ ಎಂದು ಕಾತರದಿಂದ ಕಾಯುತ್ತಿ ದ್ದೆವು.
1971ರ ಡಿ.3ರಂದು ಸೂರ್ಯಾಸ್ತದ ವೇಳೆ ನಮ್ಮ ಡಿಫೆ ನ್ಸ್‌ನ ಮೇಲೆ ತೀರಾ ಕೆಳಮಟ್ಟದಲ್ಲಿ ರಾಡಾರ್ ಕಣ್ತಪ್ಪಿಸಿ ಪಾಕಿ ಸ್ಥಾನದ 3-4 ಯುದ್ಧವಿಮಾನಗಳು ಹಾರಾಡಿ ದವು. ನಮ್ಮ ಯುದ್ಧವಿಮಾನಗಳು ಪಾಕ್‌ನ ವಿಮಾನಗಳನ್ನು ಹಿಮ್ಮೆಟ್ಟಿಸಿ ದವು. ಮೊದಲು ನಮ್ಮ ಏರಫೀಲ್ಡ್ ನಾಶಪಡಿಸುವುದು (ಬ್ಲಿಟ್ಜ್ ಕ್ರೀಗ್) ಅವರ ಉದ್ದೇಶವಾಗಿತ್ತು. ಬಳಿಕ ಲಾಹೋರ್ ಭಾಗ ದಲ್ಲಿ ಬೆಂಕಿಯುಂಡೆಗಳು ಏಳಲಾರಂಭಿಸಿ ದವು. ಗನ್(ತೋಪು)ಗಳ ಮೂಲಕ ಪಾಕ್ ಆಕ್ರಮಣ ಆರಂಭಿಸಿತ್ತು. ನಮ್ಮ ಸೇನೆಯೂ ಪ್ರತಿ ದಾಳಿ ಮಾಡುತ್ತಿತ್ತು. ಅತ್ತ ಭಾರತದ ಸೇನೆ ಪಾಕಿಸ್ಥಾನ ಸೈನ್ಯವನ್ನು ಹಿಮ್ಮೆಟ್ಟಿಸಿ ಢಾಕಾ ವನ್ನು ವಶಪಡಿಸಿಕೊಳ್ಳುತ್ತಿತ್ತು.
ಇತ್ತ ಡಿ.12ರ ಸೂರ್ಯೋದಯದ ಮೊದಲು ರಾವಿ ನದಿ ತೀರದಿಂದ ಸುಮಾರು 15 ಕಿ.ಮೀ. ದೂರದಲ್ಲಿದ್ದ ಪಾಕಿಸ್ಥಾನದ ಫತೇಪುರ್ ಪೋಸ್ಟ್‌ನ್ನು ಡಿ.12ರ ಸೂರ್ಯೋದಯದ ಮೊದಲು ನಾಶಪಡಿಸಲು ಡಿ.7ರಂದು ನಮಗೆ ಆದೇಶ ಬಂದಿತ್ತು. ನಮಗೆ 5 ದಿನಗಳ ಕಾಲಾವಕಾಶ ಮಾತ್ರವಿತ್ತು. ಆ ಪೋಸ್ಟ್ ಅಪಾರ ಶಸ್ತ್ರಾಸ್ತ, ಸೈನಿಕರನ್ನು ಹೊಂದಿತ್ತು. ಯಾವಾಗ ಯುದ್ಧ ಆರಂಭವಾಗುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದೆವು. ಮರುದಿನ ಮುಖಾಮುಖಿ ಯುದ್ಧ ಆರಂಭವಾಗುವ ಉತ್ಸಾಹದಿಂದ ಡಿ.10ರಂದು ಸಂಭ್ರಮಿಸಿದ್ದೆವು. ಡಿ.11ರ ರಾತ್ರಿ ನಾವು ಆಕ್ರಮಣಕ್ಕಾಗಿ ಮುನ್ನಡೆದೆವು. ರಾತ್ರಿ 11ರಿಂದ ಮರುದಿನ ಮುಂಜಾವ 5ರ ವರೆಗೆ ಗ್ರೆನೇಡ್, ಬಯೋನೆಟ್, ಸ್ಟೆನ್ ಗನ್ ಮೊದಲಾದವುಗಳ ಮೂಲಕ ತೀರಾ ಹತ್ತಿರದಿಂದಲೇ ಪಾಕ್ ಸೈನಿಕರೊಂದಿಗೆ ಮುಖಾಮುಖಿ- ಕೈ ಕೈ ಯುದ್ಧ (ಕ್ಲೋಸ್ ಕ್ವಾರ್ಟರ್ ಬ್ಯಾಟಲ್- ಸಿಕ್ಯುಬಿ) ನಡೆಯಿತು.
ಕೊನೆಗೂ ಪಾಕ್ ಸೈನಿಕರನ್ನು ಮಣಿಸು ವಲ್ಲಿ ಯಶಸ್ವಿಯಾದೆವು. ನಮ್ಮ ರೆಜಿಮೆಂಟ್‌ನ 42 ಮಂದಿ ವೀರಮರಣವನ್ನು ಹೊಂದಿದರು. 86 ಮಂದಿ ಗಂಭೀರವಾಗಿ ಗಾಯಗೊಂಡರು. ನನ್ನ ಜತೆಯಲ್ಲೇ ಇದ್ದ ಸೆಕೆಂಡ್ ಲೆಫ್ಟಿನೆಂಟ್ ಎಚ್.ಪಿ. ಹರ್‌ದೇವ್ ಪಾಲ್ ನಯ್ಯರ್, ಲೆ| ಕರಮ್ ಸಿಂಗ್, ಮೇ| ತೀರತ್ ಸಿಂಗ್ ಕೂಡ ಪ್ರಾಣಬಿಟ್ಟಿದ್ದರು. ಹಿಂದಿನ ದಿನ ರಾತ್ರಿ ನಾವು ಮೂರು ಮಂದಿ ಗೆಳೆಯರು ಕೂಡ ಒಂದೇ ಪಾತ್ರೆಯಲ್ಲಿ ಚಪಾತಿ, ದಾಲ್ ತಿಂದಿದ್ದೆವು. ಮುಖಾಮುಖಿ ಯುದ್ದ ಮುಗಿದ ಅನಂತರ ಅರೆ ಜೀವವಾಗಿದ್ದ ಕೆಲವರನ್ನು ಬದುಕಿಸಲು ಕೈಯಲ್ಲಾದ ಪ್ರಯತ್ನ ನಡೆಸಿದ್ದೆವು. ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಇದ್ದರೂ ಗಂಭೀರವಾಗಿ ಗಾಯಗೊಂಡಿದ್ದ ಕೆಲವರನ್ನು ಉಳಿಸಲು ಭಾರೀ ಹರಸಾಹಸ ಪಟ್ಟೆವು. ಸಿಕ್ಖ್ ಸೈನಿಕರ ತಲೆಯಲ್ಲಿದ್ದ ಪಗಡಿಯನ್ನು (ತಲೆಗೆ ಧರಿಸುವ ಬಟ್ಟೆ) ಗಾಯಗೊಂಡಿದ್ದ ಕೆಲವು ಸೈನಿಕರ ಹೊಟ್ಟೆಗೆ ಕಟ್ಟಿ ಮಿಲಿಟರಿ ಆಸ್ಪತ್ರೆಗೆ ಸಾಗಿಸಿದ್ದು ಕೂಡ ನೆನಪಿದೆ. ನಮ್ಮ ಹೋರಾಟದ ಹಿನ್ನೆಲೆಯಲ್ಲಿ ನಮ್ಮ ರೆಜಮೆಂಟ್‌ಗೆ 1 ಮಹಾವೀರ ಚಕ್ರ, 4 ವೀರ ಚಕ್ರ, 5 ಸೇನಾ ಮೆಡಲ್, “ಬ್ಯಾಟಲ್ ಹಾನರ್ ಫತೇಪುರ್’ ಲಭಿಸಿದೆ.
-ನಿರೂಪಣೆ: ಸಂತೋಷ್ ಬೊಳ್ಳೆಟ್ಟು