ಇಸ್ಲಾಮಾಬಾದ್ : ”ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವಲ್ಲಿ ಪಾಕಿಸ್ಥಾನ ನೀಡಿರುವ ಕಾಣಿಕೆಗೆ ಜಗತ್ತೇ ನಮಗೆ ಕೃತಜ್ಞತೆ ಹೇಳಬೇಕಾಗಿದೆ” ಎಂದು ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಪೂರ್ ಹೇಳಿದ್ದಾರೆ.
ಪಾಕಿಸ್ಥಾನದ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಇದರ ಮುಖ್ಯಸ್ಥರೂ ಆಗಿರುವ ಸೇನಾ ವಕ್ತಾರ ಆಸಿಫ್ ಗಫೂರ್ ಅವರು ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣದಲ್ಲಿ ಈ ಮಾತನ್ನು ಹೇಳಿದರು.
“ಪಾಕಿಸ್ಥಾನ ಸ್ವತಃ ಭಯೋತ್ಪಾದನೆಯ ಬಲಿಪಶು. ಹಾಗಿದ್ದರೂ ಅದು ಭಾರತೀಯ ಉಪ ಖಂಡದಲ್ಲಿ ಮತ್ತು ವಿಶ್ವದಲ್ಲಿ ಭಯೋತ್ಪಾದನೆಯನ್ನು ನಿರ್ನಾಮ ಮಾಡುವಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದೆ; ಜಗತ್ತು ಈ ಕಾರಣಕ್ಕೆ ಪಾಕಿಸ್ಥಾನಕ್ಕೆ ಆಭಾರಿಯಾಗಿರಬೇಕಾಗಿದೆ’ ಎಂದು ಆಸಿಫ್ ಗಫೂರ್ ಹೇಳಿರುವುದನ್ನು ಡಾನ್ ದೈನಿಕ ಉಲ್ಲೇಖೀಸಿ ವರದಿ ಮಾಡಿದೆ. ಪಾಕಿಸ್ಥಾನದಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕಲು ಇಸ್ಲಾಮಾಬಾದ್ ಮಾಡಿರುವ ತ್ಯಾಗ ಮತ್ತು ಕೈಗೊಂಡಿರುವ ನಿರ್ಣಾಯಕ ಕ್ರಮಗಳನ್ನು ಆಸಿಫ್ ಗಫೂರ್ ಹೆಮ್ಮೆಯಿಂದ ಹೇಳಿಕೊಂಡರು.
ಭಯೋತ್ಪಾದನೆಯ ವಿರುದ್ದ ಪಾಕಿಸ್ಥಾನ ಭಾರೀ ವೆಚ್ಚದಾಯಕ ಸಮರವನ್ನು ಕೈಗೊಂಡಿದೆ. ಅದರ ಯಶಸ್ಸನ್ನು ಜಗತ್ತಿಗೆ ಮನವರಿಕೆ ಮಾಡಲು ಪದೇ ಪದೇ ಯತ್ನಿಸಿದೆ ಎಂದು ಆಸಿಫ್ ಹೇಳಿದರು.
ಹಾಗಿದ್ದರೂ ಪಾಕಿಸ್ಥಾನ ಭಾರತವನ್ನು ಗುರಿ ಇರಿಸುವ ಭಯೋತ್ಪಾದಕರಿಗೆ ಏಕೆ ತರಬೇತಿ ನೀಡುತ್ತಿದೆ, ಅಮೆರಿಕದಿಂದ ಉಗ್ರನೆಂದು ಘೋಷಿಸಲ್ಪಟ್ಟಿರುವ ಹಾಫೀಜ್ ಸಯೀದ್ ಗೆ ರಾಜಕೀಯ ಪಕ್ಷ ಆರಂಭಿಸಲು ಏಕೆ ಅನುಮತಿ ನೀಡಿದೆ, ಹಕಾನಿ ಜಾಲ ಈಗಲೂ ಪಾಕ್ ನೆಲದಲ್ಲಿ ಅಮೆರಿಕದ ವಿರುದ್ಧ ಸಕ್ರಿಯವಾಗಿದೆ ಎಂಬುದನ್ನು ಉತ್ತರಿಸಲು ಸೇನಾ ವಕ್ತಾರ ಆಸಿಫ್ ಗಫೂರ್ ನಿರಾಕರಿಸಿದರು.