ಬೆಳ್ತಂಗಡಿ: ಮೂರು ವರ್ಷಗಳ ಹಿಂದೆ ಬರಗಾಲದ ಬೇಗೆಯೊಂದು ಬೆಳ್ತಂಗಡಿ ತಾಲೂಕಿನ ಜನತೆಗೆ ತಟ್ಟಿತ್ತು. ಆ ಸಂದರ್ಭದಲ್ಲಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾದಾಗ ದೇವರ ಮೊರೆ ಹೋಗಿರುವುದಲ್ಲದೆ ನಾನಾ ಹೋಮ ಹವನ ಪ್ರಾರ್ಥನೆಯನ್ನು ಅನೇಕ ಕ್ಷೇತ್ರಗಳಲ್ಲಿ ನಡೆಸಲಾಗಿತ್ತು. ಈ ಪರಿಸ್ಥಿತಿ ಮನಗಂಡು ಕರಾವಳಿಯಲ್ಲೂ ಕಿಂಡಿ ಅಣೆಕಟ್ಟು ನಿರ್ಮಿಸಿ ಅಂತರ್ಜಲ ಮಟ್ಟ ವೃದ್ಧಿಗೆ ಚಿಂತಿಸಿತ್ತು.
ಕಲ್ಮಂಜ ಗ್ರಾಮದ ಪಜಿರಡ್ಕ ಸದಾ ಶಿವೇಶ್ವರ ಕ್ಷೇತ್ರದಲ್ಲಿ ಮೃತ್ಯುಂಜಯ- ನೇತ್ರಾವತಿ ನದಿಗಳು ಸಂಗಮಗೊಂಡು ಇಲ್ಲಿಂದ ನೇತ್ರಾವತಿ ನದಿಯು ಮುಂದು ವರಿಯುತ್ತದೆ. ಈ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟು ಸಹಿತ ನದಿಯ ಮತ್ತೂಂದು ಬದಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 4.5 ಕೋಟಿ ರೂ. ಅನುದಾನ ಒದಗಿಸಿದೆ. ಇದೀಗ ಕಾಮಗಾರಿಯೂ ಪೂರ್ಣಗೊಂಡು ಪ್ರಾಯೋ ಗಿಕ ನೀರಿನ ಸಂಗ್ರಹ ಆರಂಭಿಸಲಾಗಿದೆ.
ಸಂಗಮ ಸ್ಥಳದಿಂದ 100 ಮೀ. ಕೆಳ ಭಾಗದಲ್ಲಿ ಇದೀಗ ಕಿಂಡಿ ಅಣೆಕಟ್ಟು ನಿರ್ಮಾಣ ಗೊಂಡಿದೆ. ಇದರ ಸಮೀಪವೇ ಸೇತುವೆಯು ನಿರ್ಮಾಣ ಗೊಂಡಿ ರುವುದರಿಂದ ನದಿಯ ಇನ್ನೊಂದು ಬದಿಯಲ್ಲಿರುವ ಇದೇ ಗ್ರಾಮದ ಆನಂಗಳ್ಳಿ, ಪರಾರಿ, ಸಿದ್ದಬೈಲು, ಕರಿಯನೆಲ ಪರಿಸರ ಸಹಿತ ಉಜಿರೆ, ಧರ್ಮಸ್ಥಳಕ್ಕೆ ಸಂಪರ್ಕ ಹತ್ತಿರವಾಗಲಿದೆ. ಪ್ರಸ್ತುತ ಗ್ರಾಮದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಮಳೆಗಾಲದಲ್ಲಿ ಬರಬೇಕಾದರೆ 12 ಕಿ.ಮೀ. ದೂರವನ್ನು ಕ್ರಮಿಸಬೇಕಾಗಿದೆ. ಈ ಸೇತುವೆ ನಿರ್ಮಾಣವಾಗಿರುವುದರಿಂದ ಕೇವಲ ಒಂದು ಕಿ.ಮೀ. ಕ್ರಮಿಸಿದರೆ ಸಾಕು. ಕಿಂಡಿ ಅಣೆಕಟ್ಟು ನಿರ್ಮಾಣವಾದ ಕಾರಣ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಯ ನೀರು ಸಂಗ್ರಹಕ್ಕೆ ಸಹಕಾರ ವಾಗಲಿದೆ.
4.5 ಕೋಟಿ ರೂ. ವೆಚ್ಚದಲ್ಲಿ 76.3ಮೀ. ಉದ್ದದ ಸೇತುವೆ ಹಾಗೂ 2.5 ಮೀ. ಎತ್ತರ ನೀರು ಸಂಗ್ರಹಣ ಸಾಮರ್ಥ್ಯ ಇರುವ ಸುಮಾರು 30 ಕಿಂಡಿಗಳ ಅಣೆಕಟ್ಟು ನಿರ್ಮಾಣಗೊಂಡಿದೆ. ಇದು ಕುಡೆಂಚಿ, ಆನಂಗಳ್ಳಿ ಕಡಂಬಳ್ಳಿ, ಮೂಲಾರು ಭಾಗದ ನೂರಾರು ಎಕ್ರೆ ಕೃಷಿ ಭೂಮಿಗೆ ಉಪಯೋಗವಾಗಲಿದೆ. ಅಲ್ಲದೆ ಈ ಪ್ರದೇಶಗಳ ಅಂತರ್ಜಲಮಟ್ಟವೂ ಹೆಚ್ಚಳವಾಗಲಿದೆ. ಕಿಂಡಿ ಅಣೆಕಟ್ಟಿಗೆ ಸಾಗುವಲ್ಲಿ ಪ್ರಸಕ್ತ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಚರ್ಚೆ ನಡೆಸಿ ದಿನಾಂಕ ನಿಗದಿ
ಪಜಿರಡ್ಕದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನಲ್ಲಿ ಪ್ರಾಯೋಗಿಕವಾಗಿ ನೀರನ್ನು ಸಂಗ್ರಹಿಸಲಾಗಿದೆ. ಇದರ ಉದ್ಘಾಟನೆ ಕುರಿತು ಸಂಬಂಧಪಟ್ಟವರಲ್ಲಿ ಮಾತುಕತೆ ನಡೆಸಿ ದಿನಾಂಕ ನಿಗದಿಪಡಿಸಲಾಗುವುದು. ತಾಲೂಕಿನಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕಿಂಡಿ ಅಣೆಕಟ್ಟುಗಳ ಕಾಮಗಾರಿ ಭರದಿಂದ ಸಾಗುತ್ತಿದೆ.
–ರಾಕೇಶ್, ಎಂಜಿನಿಯರ್, ಸಣ್ಣ ನಿರಾವರಿ ಇಲಾಖೆ, ಬೆಳ್ತಂಗಡಿ ವಿಭಾಗ