ದಾವಣಗೆರೆ: ಪ್ರತಿ ಬಾರಿ ವಿನೂತನ ಪ್ರಯತ್ನಗಳ ನಡೆಸುತ್ತಾ ಬಂದಿರುವ ಚಿರಂತನ ಸಂಸ್ಥೆ ಈ ಬಾರಿ ಮಹಿಳಾ ದಿನಾಚರಣೆಗೆ ವಿಭಿನ್ನವಾದ ಗೋಡೆಗಳ ಪೇಂಟಿಂಗ್ ಮಾಡಿಸುವ ಮೂಲಕ ಕಾಂಪೌಂಡ್‌ಗಳ ಸೌಂದರ್ಯ ಹೆಚ್ಚಿಸುವ ಜತೆಗೆ ಮಹಿಳಾ ಸಬಲೀಕರಣದ ಸಂದೇಶ ನೀಡುವ ಪ್ರಯತ್ನದ ಮೂಲಕ ಎಲ್ಲರ ಗಮನ ಸೆಳೆದಿದೆ.
ವಿದ್ಯಾನಗರದ ಮುಖ್ಯ ರಸ್ತೆ ಡಿಆರ್ ಆರ್ ಪಾಲಿಟೆಕ್ನಿಕ್ ಗೋಡೆಗಳ ಮೇಲೆ ದಾವಣಗೆರೆಯ 10 ಮಹಿಳಾ ಕಲಾವಿದರು ಸೂಪರ್ ವುಮೆನ್, ಸರ್ವಶಕ್ತ ಮಹಿಳೆ, ಪ್ರಕೃತಿ, ಆದರ್ಶ ಮಹಿಳೆಯ ಅತ್ಯಾಕರ್ಷಕ ಚಿತ್ರ ಬರೆಯುವ ಜತೆಗೆ ಮಹಿಳಾ ಸಬಲೀಕರಣದ ಬಲವಾದ ಸಂದೇಶ ಸಾರುವ ಮೂಲಕ ಮಹಿಳಾ ದಿನಾಚರಣೆಗೆ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ.
ಮಹಿಳಾ ಕಲಾವಿದರ ಪ್ರಯತ್ನಕ್ಕೆ ಮಹಾನಗರಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಬಿಲ್ಡಿಂಗ್ ನೀಡ್ಸ್ ಮಾಲಿಕ ಶಂಭು ಊರೆಕೊಂಡಿ ಸಹಕಾರ ನೀಡಿದ್ದಾರೆ. ಕೀರ್ತನ ಆಲ್ ಪೋನ್j, ಡಿ.ಎಸ್. ಅಂಕಿತ್, ಇಂದೂ, ನಂದಿತಾ ಆರ್. ಕಟ್ಟೆ, ಪ್ರತಿಭಾ ನರಸಿಂಹನಾಯಕ್, ಅನುಷಾ ನರಸಿಂಹನಾಯಕ್, ಅರ್ಪಿತಾ, ಸ್ನೇಹ, ಮಧುಶ್ರೀ, ಅದಿತಿ ಕೆ. ಪ್ರಕಾಶ್, ಬಸಮ್ಮ ಇತರರು ದಿನವಿಡೀ ಪೇಂಟಿಂಗ್ ಮಾಡುವ ಮೂಲಕ ಗಮನ ಸೆಳೆದರು.
ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಸಬಲೀಕರಣದ ಮಹತ್ವ ಸಾರುವ ಕಾರ್ಯದಲ್ಲಿ ನಿರತರಾಗಿದ್ದನ್ನು ಕಂಡಂತಹ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಘೋಷಾ ವಾಕ್ಯಗಳಿಗೆ ಬಹುಪರಾಕ್ ಹೇಳಿದರು.
ದಾವಣಗೆರೆ ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ ಆಡಳಿತ ಮಂಡಳಿ ದಾವಣಗೆರೆಯ ಆಪ್ಪಟ, ಪ್ರತಿಭಾವಂತ ಕಲಾವಿದರನ್ನ ಬಳಸಿಕೊಂಡು ಮಹಿಳಾ ಸಬಲೀಕರಣ ಇತರೆ ಸಾಮಾಜಿಕ ಕಳಕಳಿ ವ್ಯಕ್ತಪಡಿಸುವ ಚಿತ್ರಗಳನ್ನ ನಗರದ ವಿವಿಧೆಡೆ ಬರೆಸುವ ಮೂಲಕ ಜಾಗೃತಿ ಕಾರ್ಯಕ್ಕೆ ಮುಂದಾಗಬೇಕು. ಕಾಂಪೌಂಡ್‌ಗಳ ಜತೆಗೆ ನಗರದ ಸೌಂದರ್ಯ ಹೆಚ್ಚಿಸುವತ್ತ ಗಮನಹರಿಸಬೇಕು ಎಂದು ಚಿರಂತನದ ದೀಪಾ, ಅಲಕಾನಂದ ರಾಮದಾಸ್ ಇತರರು ವಿನಂತಿಸಿದ್ದಾರೆ.