Advertisement

ಬದುಕಿಗೆ ಬಣ್ಣ ತುಂಬುವ ಚಿತ್ರಕಲೆ 

04:00 PM Jun 27, 2018 | |

ತಾಳ್ಮೆ, ಆಸಕ್ತಿ, ಬುದ್ಧಿವಂತಿಕೆ ಜತೆಗೆ ಸಮಯವನ್ನು ಸಂಪೂರ್ಣವಾಗಿ ಉಪಯೋಗಿಸುವ ಬುದ್ಧಿವಂತಿಕೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಓದಿದ್ದು ಎಂಜಿನಿಯರಿಂಗ್‌ ಆದರೂ ಆಸಕ್ತಿ ಚಿತ್ರಕಲೆಯಲ್ಲಿ. ಮಂಗಳೂರಿನ ಶ್ರೀನಿವಾಸ ಇನ್ಸ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿಯಲ್ಲಿ ಏರೋನೆಟಿಕ್‌ ಎಂಜಿನಿಯರಿಂಗ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ, ಪ್ರಸ್ತುತ ಬೆಂಗಳೂರಿನ ಕಂಪೆನಿಯೊಂದರಲ್ಲಿ ತರಬೇತಿ ಪಡೆಯುತ್ತಿರುವ ಯತಿನ್‌, ಚಿತ್ರಕಲೆ ಬಗ್ಗೆ ಯಾವುದೇ ತರಬೇತಿ ಪಡೆದಿಲ್ಲ. ಬಾಲ್ಯದಿಂದಲೇ ಈ ಬಗ್ಗೆ ಇದ್ದ ಆಸಕ್ತಿ ಇಂದು ಅವರ ಹವ್ಯಾಸವಾಗಿ ಬೆಳೆದಿದೆ.

Advertisement

ತಂದೆ- ತಾಯಿಯ ನಿರಂತರ ಪ್ರೋತ್ಸಾಹದಿಂದ ಎಂಜಿನಿಯರಿಂಗ್‌ ಕಲಿಕೆಯ ಜತೆಗೆ ಚಿತ್ರಕಲೆಯ ಆಸಕ್ತಿಯು ಬೆಳೆಯುತ್ತಾ ಹೋಯಿತು ಎನ್ನುತ್ತಾರೆ ಯತೀನ್‌. ಹಲವು ಕಲಾವಿದರಿಂದ ಪ್ರೇರಣೆ ಪಡೆದ ಯತೀನ್‌ಗೂ ಚಿತ್ರಕಲೆ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲವಿದೆ. ಪೈಂಟಿಂಗ್‌ ಎಲ್ಲರಿಗೂ ಇಷ್ಟವಾಗುವ ಕಲೆ. ಜತೆಗೆ ಮನಸ್ಸಿಗೆ ಪ್ರಿಯವಾಗುವ ಕಾರ್ಯ. ಹೊಸಹೊಸ ಯೋಚನೆಗಳು, ಚಿಂತನೆಗಳು ಬೆಳೆಯಲು ಇದು ಪ್ರೇರಣೆ. ಕಲ್ಪನೆಯೇ ಇದಕ್ಕೆ ಬಂಡವಾಳ ಎನ್ನುವ ಯತೀನ್‌ ಪೈಂಟಿಂಗ್‌ನ ಹಲವು ಮಾದರಿಗಳನ್ನು ಬಿಡಿಸುತ್ತಾರೆ. ಅದರಲ್ಲಿ ಮುಖ್ಯವಾಗಿ ಪೆನ್ಸಿಲ್‌ ಸ್ಕೆಚ್‌, 3ಡಿ ಆರ್ಟ್‌, ಚುಕ್ಕಿ ಚಿತ್ರ, 5 ಮಿನಟ್ಸ್‌ ಪೈಂಟಿಂಗ್‌.

ಉದ್ಯೋಗಕ್ಕೊಂದು ದಾರಿ
ಚಿತ್ರಕಲೆಯ ಹವ್ಯಾಸವಿದ್ದವರು ಲಕ್ಷಾಂತರ ರೂ. ಸಂಪಾದನೆಯನ್ನೂ ಮಾಡಬಹುದು. ಮನಸ್ಸಿಗೆ ಖುಷಿ ಕೊಡುವ ಚಿತ್ರಕಲೆಯನ್ನು ಹವ್ಯಾಸವನ್ನಾಗಿಯೂ ಬೆಳೆಸಿಕೊಳ್ಳಬಹುದು. ಬಿಡುವಿದ್ದ ವೇಳೆಯಲ್ಲಿ ಅಥವಾ ಫ‌ುಲ್‌ ಟೈಮ್‌ ಕೆಲಸವನ್ನಾಗಿಯೂ ಮಾಡಿಕೊಳ್ಳಬಹುದು.
ಚಿತ್ರಕಲೆಯಲ್ಲಿ ತೊಡಗಿಕೊಂಡಿರುವವರಿಗೆ ಆರ್ಕಿಟೆಕ್ಟ್, ಫ್ಯಾಷನ್‌ ಇಂಡಸ್ಟ್ರೀ, ಮಾಡೆಲಿಂಗ್‌ ಸಹಿತ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳೂ ಇವೆ. ಹೀಗಾಗಿ ಚಿತ್ರಕಲೆಯನ್ನು ಕಲಿತರೆ ಬದುಕಿಗೊಂದು ಹೊಸ ದಾರಿ ಹುಡುಕಿದಂತಾಗುವುದು. 

ಕಲಿಕೆ ಸುಲಭ
ಗುರುವಿನೊಂದಿಗೆ ಅಥವಾ ಗುರು ಇಲ್ಲದೆಯೂ ಕಲಿಯಬಹುದಾಗಿರುವ ಕಲೆಗಳಲ್ಲಿ ಚಿತ್ರಕಲೆಯೂ ಒಂದು. ಚಿತ್ರಗಳನ್ನು ನೋಡುತ್ತಾ, ಮಾದರಿಯನ್ನು ಅನುಸರಿಸುತ್ತಾ ಬಂದರೆ ಚಿತ್ರಕಲೆ ಅಭ್ಯಾಸ ನಮ್ಮೊಳಗೆ ನಮಗರಿವಿಲ್ಲದಂತೆ ಹವ್ಯಾಸವಾಗಿ ಬೆಳೆಯುತ್ತದೆ. ಈ ಕುರಿತು ತರಬೇತಿ ನೀಡುವ ಸಾಕಷ್ಟು ಸಂಸ್ಥೆಗಳು, ಆನ್‌ಲೈನ್‌ ಶಿಕ್ಷಣವೂ ಇದೆ. ಓದು, ವೃತ್ತಿಯೊಂದಿಗೆ ಇದನ್ನೂ ಹವ್ಯಾಸವನ್ನಾಗಿ ಬೆಳೆಸಿಕೊಳ್ಳಬಹುದು, ಪಾರ್ಟ್‌ ಟೈಂ ವೃತ್ತಿಯನ್ನಾಗಿ ಮಾಡಿಕೊಳ್ಳಬಹುದು. 

ಶ್ರುತಿ ನೀರಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next